ADVERTISEMENT

ಸತ್ಯಸಾಯಿ ರೂಪಾ ಮಂದಿರ ಆರಂಭ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಚಿಕ್ಕಬಳ್ಳಾಪುರ: ನಗರದ ವಾಪಸಂದ್ರದ ಉತ್ತರ ಬಡಾವಣೆಯ ಪ್ರಶಾಂತಿ ಬಾಲಮಂದಿರದ ಆವರಣದಲ್ಲಿ  `ಸತ್ಯಸಾಯಿ ರೂಪಾ~ ಮಂದಿರ, `ನಾರಾಯಣಮ್ಮ ಮತ್ತು ರಾಮಯ್ಯ ಶಾಲಾ ಕಟ್ಟಡ~ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.

ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಕಾರ್ಯದರ್ಶಿ ಬಿ.ಎನ್.ನರಸಿಂಹಮೂರ್ತಿ ಮತನಾಡಿ `ಪುಟ್ಟಪರ್ತಿ ಸತ್ಯಸಾಯಿಬಾಬಾ ಸಮಾಜಾಭಿವೃದ್ಧಿ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಆಧ್ಯಾತ್ಮ ಮತ್ತು ಸೇವಾ ಮನೋಭಾವದಿಂದ ಲೋಕಸೇವೆ ಕೈಗೊಳ್ಳಬೇಕಿದೆ~ ಎಂದರು.

`ಉತ್ತಮ ಚಿಂತನೆ, ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸತ್ಯ ಸಾಯಿಬಾಬಾ ಅವರು ದೇಶದೆಲ್ಲೆಡೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನೀಡಿದರು. ಬಾಲವಾಡಿಯಿಂದ ಸ್ನಾತಕೋತ್ತರ ವರೆಗೆ ಶಿಕ್ಷಣ ನೀಡಬಲ್ಲ ಹಲವು ವಿದ್ಯಾಸಂಸ್ಥೆಗಳನ್ನು ವಿವಿಧೆಡೆ ಸ್ಥಾಪಿಸಿದರು~ ಎಂದರು.

`ದೇಶದೆಲ್ಲೆಡೆ ನೂರು ಶಿಕ್ಷಣ ಸಂಸ್ಥೆಗಳಿದ್ದು, ರಾಜ್ಯದಲ್ಲಿ 14 ಶಿಕ್ಷಣ ಸಂಸ್ಥೆಗಳಿವೆ. ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ವಿಶ್ವವಿದ್ಯಾಲಯದಲ್ಲಿ ಉನ್ನತ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ~ ಎಂದರು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್, ಸತ್ಯಸಾಯಿ ಸೇವಾ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ನಾಗೇಶ್ ದಾಕಪ್ಪ, ಪ್ರತಿನಿಧಿಗಳಾದ ಎಂ.ಎಸ್.ಸತ್ಯನಾರಾಯಣ, ಡಾ.ರವಿ ಪಿಳ್ಳೆ ಮತ್ತಿತರರು ಇದ್ದರು. ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.