ADVERTISEMENT

ಸಮರಸವೇ ಜೀವನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST
ಸಮರಸವೇ ಜೀವನ
ಸಮರಸವೇ ಜೀವನ   

ಹಾಸನ: ಅರಸೀಕೆರೆ ತಾಲ್ಲೂಕಿನ ಜೇನುಕಲ್ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಪುತ್ರಿ ಎಸ್.ಮಾನಸಾ ಹಾಗೂ ಜೆ. ವರುಣ್ ಜೋಡಿ ಸೇರಿದಂತೆ 70ಕ್ಕೂ ಹೆಚ್ಚು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಸರಳ ಸಾಮೂಹಿಕ ವಿವಾಹದಲ್ಲೇ ಮಗಳ ಮದುವೆ ಮಾಡುವುದಾಗಿ ನಿರ್ಧರಿಸಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಸಾಮೂಹಿಕ ವಿವಾಹ ಆಯೋಜಿಸಿದ್ದರು. ವಿವಿಧ ಜಾತಿ, ಧರ್ಮಗಳಿಗೆ ಸೇರಿದ ಧರ್ಮಗುರುಗಳು, ವಿವಿಧ ಪಕ್ಷಗಳ ರಾಜಕಾರಣಿಗಳು, ಸಹಸ್ರಾರು ಜನರು ಪಾಲ್ಗೊಂಡು ವಧುವರರನ್ನು ಹರಸಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಚಿತ್ರದುರ್ಗದ ಮುರುಘಾ ಶರಣರು ‘ಆಡಂಬರ ಹೆಚ್ಚಾದಾಗ ಆದರ್ಶ ಮೂಲೆಗುಂಪಾಗುತ್ತದೆ. ಸರಳ ವಿವಾಹಗಳ ಮೂಲಕ ಸಮಾಜದ ಗಣ್ಯರೆನಿಸಿಕೊಂಡವರು ಆದರ್ಶವನ್ನು ಮೆರೆಯಬೇಕು’ ಎಂದರು.ನೂತನ ವಧು ವರರಿಗೆ ಕಿವಿಮಾತು ಹೇಳುತ್ತ, ‘ಬದುಕು ಎಂದರೆ ಹೊಂದಾಣಿಕೆ. ಸಂಸಾರದಲ್ಲಿ ಏನೇ ಕಷ್ಟ ಬಂದರೂ ಹೊಂದಾಣಿಕೆಯಿಂದ ಇರಬೇಕು. ಶಾಂತಿ, ಪ್ರೀತಿ ಸಹನೆ ಸಂಸಾರದ ಧರ್ಮ. ಇವು ಖರೀದಿಗೆ ಸಿಗುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿರಿಸಿದವರು ‘ಒಂದೇ ಮಗು ಸಾಕು’ ಎಂಬ ತೀರ್ಮಾನ ಕೈಗೊಳ್ಳಬೇಕು’ ಎಂದರು.
 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ಜಯಚಂದ್ರ, ಎಚ್.ಕೆ. ಕುಮಾರಸ್ವಾಮಿ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT