ADVERTISEMENT

ಸರ್ಕಾರದ ಸ್ವತ್ತು ರಕ್ಷಿಸಿ: ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 18:45 IST
Last Updated 17 ಸೆಪ್ಟೆಂಬರ್ 2011, 18:45 IST

ಅರಕಲಗೂಡು: ಸರ್ಕಾರದ ಸ್ವತ್ತು ರಕ್ಷಣೆ ಮಾಡಲು ಜನತೆ ಸಿದ್ಧವಾಗಬೇಕು ಎಂದು ಶಾಸಕ ಎ.ಮಂಜು ತಿಳಿಸಿದರು. ತಾಲ್ಲೂಕಿನ ರಾಜಾರಾಮಪುರದಲ್ಲಿ ಶನಿವಾರ ನೂತನ ಪ್ರೌಢಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಪ್ರೌಢಶಾಲೆಗೆ ಸೂಕ್ತ ಕಟ್ಟಡವಿಲ್ಲದ್ದನ್ನು ಮನಗಂಡು ರೂ. 20 ಲಕ್ಷ ವೆಚ್ಚದಲ್ಲಿ ಉತ್ತಮ ಕಟ್ಟಡ ನಿರ್ಮಿಸಲಾಗಿದೆ.

ಇದರ ಜತೆ ಶಿಕ್ಷಕರ ವಸತಿ ಗೃಹ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಈ ರೀತಿ ಶಿಕ್ಷಕರ ವಸತಿ ಗೃಹ ನಿರ್ಮಾಣಗೊಳ್ಳುತ್ತಿರುವ ತಾಲ್ಲೂಕಿನ ಪ್ರಥಮ ಪ್ರೌಢಶಾಲೆ ಇದು ಎಂದರು.

ದೊಡ್ಡಬೆಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಮಮತ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚನ್ನಿಗರಾಮಯ್ಯ, ಸದಸ್ಯ ಬಸವೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಂತರ ಶಾಸಕರು ತಾಲ್ಲೂಕಿನ ಕೊಳ್ಳಂಗಿ ಮತ್ತು ಮುಸವತ್ತೂರು ಗ್ರಾಮಗಳ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, 85 ಲಕ್ಷ ರೂ ವೆಚ್ಚದಲ್ಲಿ 4.5. ಕಿಲೋ ಮೀಟರ್ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿರುವ ರೈತರು ರಸ್ತೆ  ನಿರ್ಮಾಣಕ್ಕೆ ಜಾಗ ತೆರವು ಮಾಡಿಕೊಡಬೇಕು ಎಂದರು.

ಗ್ರಾಮದ ಮುಖಂಡ ಶ್ರೀಕಂಠಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಟಿ.ಪುನೀತ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ. ಬಸವರಾಜ್, ಗಾಮ ಪಂಚಾಯಿತಿ ಸದಸ್ಯ ಸಿದ್ದಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.