ADVERTISEMENT

ಸಲ್ಲದ ಆರೋಪ: ಕಾನೂನು ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಚನ್ನಪಟ್ಟಣ:  ತಾಲ್ಲೂಕಿನ ಕೂರಣಗೆರೆ ಗ್ರಾಮದ ಸರ್ವೆ ನಂಬರ್ 9/1ಎ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ರೈತಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಅವರು ತಮ್ಮ ವಿರುದ್ಧ ವಿನಾಃ ಕಾರಣ ಸಲ್ಲದ ಆರೋಪ ಮಾಡಿದ್ದು, ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವುದಾಗಿ ತಹಶೀಲ್ದಾರ್ ಅರುಣಪ್ರಭಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಹಾಗೂ ಗ್ರಾಮದ ರಾಜ್‌ಗೋಪಾಲ್ ಬಿನ್ ಸುರೇಶ್, ತಹಶೀಲ್ದಾರ್ ಕೋರ್ಟ್ ನೀಡಿದ ಆದೇಶವನ್ನು ಟೀಕಿಸಿದ್ದು, ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಆದ್ದರಿಂದ ಇವರ ಮೇಲೆ ಭಾರತೀಯ ದಂಡ ಸಂಹಿತೆ 120 ಹಾಗೂ 200ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಗ್ರಾಮದ ಸರ್ವೆ ನಂಬರ್ 9/1ಎ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಅವ್ಯವಹಾರ ನಡೆಯದಿದ್ದರೂ ಇವರು ತಮ್ಮ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಕೂರಣಗೆರೆ ಗ್ರಾಮದ ಸಿದ್ದೇಗೌಡ ಬಿನ್ ಬೋರೇಗೌಡ ಅವರಿಗೆ ಸೇರಿದ ಜಮೀನನ್ನು ಅವರ ಮರಣದ ನಂತರ ಅವರ ಮಕ್ಕಳು ವಿಭಾಗ ಮಾಡಿಕೊಂಡು, ಪಿತ್ರಾರ್ಜಿತವಾಗಿ ಬಂದ ಜಮೀನನ್ನು ತಮಗೆ ಖಾತೆ ಮಾಡಿಕೊಡುವಂತೆ  2006ರಲ್ಲಿ ಅರ್ಜಿ ಸಲ್ಲಿಸಿದ್ದು, ಅಂದಿನ ರಾಜಸ್ವ ನಿರೀಕ್ಷಕ ಎನ್.ನಂಜಪ್ಪ ಅವರ ವರದಿಯನ್ನು ಪರಿಶೀಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ.

ಆ ನಂತರ ಪಹಣಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪಹಣಿ ತಿದ್ದುಪಡಿಗೆ ಸೂಚಿಸಿ ಅನುಭವದಾರರಿಗೆ ಪತ್ರ ಕಳುಹಿಸಿ ವಿಷಯ ಮುಟ್ಟಿಸಲಾಗಿತ್ತು. ಅನುಭವದಾರರ ಪೈಕಿ ಪುಟ್ಟಮ್ಮ ಎಂಬುವರು ಮಾತ್ರ ತಮ್ಮ ಜಮೀನನ್ನು ಎಂ.ಲೀಲಾವತಿ ಎಂಬುವರಿಗೆ ಕ್ರಯಾ ಮಾಡಿದ್ದರು. ಮತ್ತೊಬ್ಬ ಅನುಭವದಾರರಾದ ರಾಜ್‌ಗೋಪಾಲ್ ಮರಣ ಹೊಂದಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ವರದಿ ನೀಡಿದ್ದರು. 

ಉಳಿದ ಅನುಭವದಾರರು ಪಹಣಿ ತಿದ್ದುಪಡಿಗೆ ತಮಗೆ ಆಕ್ಷೇಪಣೆ ಇಲ್ಲ ಎಂದು ಒಪ್ಪಿಗೆ ಸೂಚಿಸಿದ್ದರು. ಆ ಪ್ರಕಾರ ಹಾಜರಾಗಿರುವ ಖಾತೆದಾರರು ಹಾಗೂ ಅನುಭವದಾರರ ಒಪ್ಪಿಗೆ ಪಡೆದು ತಿದ್ದುಪಡಿ ಮಾಡಲಾಗಿದೆ. ಇಷ್ಟಿದ್ದರೂ ಇವರಿಬ್ಬರು ತಮ್ಮ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಜ್‌ಗೋಪಾಲ್ ಪುತ್ರ ಸುರೇಶ್ ಅವರಿಗೆ ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸುವಂತೆ ಮೌಖಿಕವಾಗಿ ತಿಳಿಸಲಾಗಿತ್ತು ಎಂದು ತಹಶೀಲ್ದಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.