ADVERTISEMENT

ಸಾಮಾಜಿಕ ಪರಿವರ್ತನೆ ತರಲು ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಚಿತ್ರದುರ್ಗ: ಜನಸಾಮಾನ್ಯರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆ ತರುವುದೇ ಸರ್ಕಾರದ ಗುರಿಯಾಗಬೇಕು ಎಂದು ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಪ್ರತಿಪಾದಿಸಿದರು.

ನಗರದಲ್ಲಿ ಶನಿವಾರ ನಡೆದ ಬಿಜೆಪಿ ‘ಶಕ್ತಿ ಕೇಂದ್ರ’ದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಅಭ್ಯುದಯ ಮತ್ತು ಸಮಾಜದ ಪರಿವರ್ತನೆಗೆ ಚುನಾಯಿತ ಪ್ರತಿನಿಧಿಯ ಅಗತ್ಯವಿದೆ. ಸಮಾಜ ಕಟ್ಟುವ ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಆದ್ದರಿಂದ ಕಾರ್ಯಕರ್ತರು ಸೈದ್ಧಾಂತಿಕ ಹಿನ್ನೆಲೆಯಲ್ಲಿ ದುಡಿದು ಜನರಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ 45 ಸಾವಿರ ದಿನಗಳು, ಜೆಡಿಎಸ್ 8 ಸಾವಿರ ದಿನಗಳು ಮತ್ತು ಬಿಜೆಪಿ 1 ಸಾವಿರ ದಿನಗಳ ಆಡಳಿತ ನಡೆಸಿವೆ. ಚಿತ್ರದುರ್ಗ ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದರೆ 45 ಸಾವಿರ ದಿನಗಳ ಆಡಳಿತ ಹೇಗೆ ನಡೆದಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಇನ್ನೂ ಅಸ್ಪೃಶ್ಯತೆ ಇದೆ. ಸುಮಾರು 172 ಹಳ್ಳಿಗಳ ಗೊಲ್ಲರಹಟ್ಟಿಗಳು ಇತರ ಸಮಾಜದ ಬಂಧುಗಳ ಜತೆ ಸಾಮರಸ್ಯವನ್ನೇ ಬೆಳೆಸದಿರುವುದು ದುರದೃಷ್ಟಕರ. ಶೋಷಣೆಯ ಸ್ಥಿತಿಯಲ್ಲಿರುವ ನಾಗರಿಕರ ಬದುಕನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕು. ಇದಕ್ಕಾಗಿ ಶೈಕ್ಷಣಿಕ ಕ್ರಾಂತಿಯಾಗಬೇಕು. ಕೀಳರಿಮೆಯನ್ನು ತೊಡೆದುಹಾಕುವ ಪ್ರಯತ್ನ ನಡೆಯಬೇಕು ಎಂದು ನುಡಿದರು.

ಅನೇಕ ರಾಜಕೀಯ ಪಕ್ಷಗಳಿಗೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾರ್ಯಕರ್ತರು ನೆನಪಾಗುತ್ತಾರೆ. ಬಿಜೆಪಿಯಲ್ಲಿ ಮಾತ್ರ ನಿರಂತರ ಬೂತ್‌ಮಟ್ಟದಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ಅನ್ವರ್ ಮಾನಿಪಾಡಿ, ನಂದೀಶ್, ಗಿರೀಶ್ ಪಟೇಲ್, ಟಿ. ಗುರುಸಿದ್ಧನಗೌಡ, ಗೀತಾ ಧನಂಜಯ, ಸಿದ್ದೇಶ್ ಯಾದವ್ ಹಾಜರಿದ್ದರು.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT