
ಕುಮಟಾ: `ಯಾವುದೇ ವಲಸೆಗೆ ಹೊರಗಿನ ಹಾಗೂ ಒಳಗಿನ ಒತ್ತಡ ಕಾರಣವಾದರೆ ನನ್ನ ಮೊದಲ ಕಾದಂಬರಿ `ಸ್ವಪ್ನ ಸಾರಸ್ವತ ಲೋಕ~ ಕಾದಂಬರಿ ರಚನೆಗೆ ಧಾರ್ಮಿಕ ಒತ್ತಡಕ್ಕೆ ಒಳಗಾಗಿ ಸಾರಸ್ವತ ಸಮುದಾಯ ವಲಸೆ ಹೋಗಿರುವುದೇ ಪ್ರೇರಣೆ~ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಗೋಪಾಲಕೃಷ್ಣ ಪೈ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.
ಕುಮಟಾ ಕನ್ನಡ ಸಾಹಿತ್ಯ ಪರಿಷತ್ ಘಟಕ ನೀಡಿದ ಸನ್ಮಾನ ಸ್ವೀಕರಿಸಿ ಮಾತನಡಿದ ಅವರು, `ಇಲ್ಲಿಯ ಗಿಬ್ಸ್ ಹೈಸ್ಕೂಲು, ಕೆನರಾ ಕಾಲೇಜು ಸೊಸೈಟಿ, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳು ಮತ್ತು ಬರಹಗಾರರಾದ ಗೌರೀಶ ಕಾಯ್ಕಿಣಿ, ಜಯಂತ ಕಾಯ್ಕಿಣಿ ನನಗೆ ಕುಮಟಾವನ್ನು ಹತ್ತಿರವಾಗಿಸಿದ್ದಾರೆ~ ಎಂದರು.
`ಕಾದಂಬರಿಯ ಮಾಹಿತಿ ಸಂಗ್ರಹಕ್ಕಾಗಿ ಉತ್ತರ ಗೋವಾದಿಂದ ಕೊಚ್ಚಿವರೆಗೆ ಸುಮಾರು 60 ಬಾರಿ ಓಡಾಡಿದ್ದೇನೆ. ಮುಟ್ಟಿದರೆ ಪುಡಿಯಾಗುವಂಥ ಹಾಳೆಗಳ ಪುಸ್ತಕಗಳಿಂದ ಮಾಹಿತಿ ಕಲೆಹಾಕಿದ್ದೇನೆ. ವಲಸಿಗ ಜನರನ್ನು ಸ್ವತಃ ಭೇಟಿಯಾಗಿ ಅವರ ಅನುಭವ ದಾಖಲಿಸಿಕೊಂಡಿದ್ದೇನೆ~ ಎಂದು ನುಡಿದರು.
`ಸಾರಸ್ವತ ಸಮುದಾಯದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲದ್ದರಿಂದ ಕಾದಂಬರಿ ಪ್ರಕಟಣೆಯಿಂದ ಪ್ರಕಾಶಕರಿಗೆ ಲಾಭ ಆಗಬಹುದು ಎನ್ನುವ ಭರವಸೆ ಇರಲಿಲ್ಲ. ಅಚ್ಚರಿಯೆಂದರೆ ಈ ಕೃತಿ ಓದುಗರಿಂದ ಸ್ವೀಕೃತಗೊಂಡಿತು. ಸಹ ಲೇಖಕರು ಮೆಚ್ಚಿಕೊಂಡರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಬಂತು~ ಎಂದು ತಮ್ಮ ಅನುಭವ ಬಿಚ್ಚಿಟ್ಟರು.
ಉದ್ಯಮಿ ಮುರಳೀಧರ ಪ್ರಭು ಮಾತನಾಡಿದರು. ಜ್ಲ್ಲಿಲಾ ಕಸಾಪ ಅಧ್ಯಕ್ಷ ರೋಹಿದಾಸ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಅಧ್ಯಕ್ಷ ಎನ್.ಆರ್. ಗಜು ಸ್ವಾಗತಿಸಿದರು. ನಂತರ `ಸ್ವಪ್ನ ಸಾರಸ್ವತ ಲೋಕ~ ಕೃತಿಯ ಬಗ್ಗೆ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.