ADVERTISEMENT

ಸಿದ್ದರಾಮೇಶ್ವರ ಜಯಂತಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ತಿಪಟೂರು: ತಾಲ್ಲೂಕಿನ ರಂಗಾಪುರ ಕೆರಗೋಡಿ ಸುಕ್ಷೇತ್ರದಲ್ಲಿ ಶನಿವಾರ (ಜ.14) ಮತ್ತು ಭಾನುವಾರ  ನಡೆಯಲಿರುವ ಗುರು ಸಿದ್ದರಾಮೇಶ್ವರ ಜಯಂತಿ ಮಹೋತ್ಸವಕ್ಕೆ ಶುಕ್ರವಾರ ಅಂತಿಮ ಸ್ಪರ್ಶ ನೀಡಲಾಯಿತು.

ಮಹೋತ್ಸವಕ್ಕೆ ವಿವಿಧೆಡೆಯಿಂದ ಅಪಾರ ಜನಸ್ತೋಮ ಸೇರುವ ನಿರೀಕ್ಷೆಯಿದೆ. ಸಾವಿರಾರು ಜನರು ಆಗಮಿಸುವ ಹಿನ್ನಲೆಯಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ ಉದ್ಘಾಟನೆಗೊಳ್ಳುವ ಸಮಾರಂಭಕ್ಕೆ ಎಲ್ಲ ದಾರಿಗಳು ರಂಗಾಪುರದ ಕಡೆಗೆ ಎಂಬಂತೆ ಎಲ್ಲರನ್ನೂ ಸ್ವಾಗತಿಸಲು ಸ್ವಾಗತ ಕಮಾನು, ಪ್ಲೆಕ್ಸ್, ಸಿದ್ದರಾಮ ಧ್ವಜ, ತಳಿರು ತೋರಣ ರಾರಾಜಿಸುತ್ತಿವೆ. ತಿಪಟೂರಿನಿಂದ ರಂಗಾಪುರ ಸಂಪರ್ಕಿಸುವ ಪ್ರಮುಖ ರಸ್ತೆಗಳ ಉದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಹೊಸಹಳ್ಳಿ ಮಾರ್ಗದಲ್ಲಿ ರಂಗಾಪುರ ಪ್ರವೇಶಿಸುವ ಹೊರ ವಲಯದಲ್ಲಿ ಹೊಲಗಳನ್ನು ಬಳಸಿಕೊಂಡು ಅರ್ಧ ಕಿ.ಮೀ ಉದ್ದ- ಅಗಲ ವ್ಯಾಪ್ತಿಯಲ್ಲಿ ಬೃಹತ್ ಸಭಾಂಗಣ, ವಸ್ತು ಪ್ರದರ್ಶನಕ್ಕಾಗಿ 100ಕ್ಕೂ ಹೆಚ್ಚು ಮಳಿಗೆ, ಅಡುಗೆ, ಊಟದ ವ್ಯವಸ್ಥೆಗಾಗಿ ಭಾರಿ ಟೆಂಟ್ ನಿರ್ಮಿಸಲಾಗಿದೆ.

ತಾಲ್ಲೂಕಿನಲ್ಲೇ ಇದೇ ಪ್ರಥಮ ಬಾರಿಗೆ ಸುಮಾರು 25 ಸಾವಿರ ಜನ ಕೂರಬಹುದಾದ ಬೃಹತ್ ಸಭಾಂಗಣ, ಎರಡು ಹಂತದ ವಿಸ್ತಾರ ವೇದಿಕೆ ತಲೆ ಎತ್ತಿವೆ. ಸಮೀಪದಲ್ಲೇ ಹೆಲಿಪ್ಯಾಡ್ ನಿರ್ಮಾಣವಾಗಿದೆ.

ಸಾಂಪ್ರದಾಯಿಕ ಕಲಾಶೈಲಿ ಬಳಸಿ ವೇದಿಕೆಯನ್ನು ಆಕರ್ಷಕವಾಗಿ ಸಿದ್ಧಗೊಳಿಸಲಾಗಿದೆ. ಊಟಕ್ಕಾಗಿ 125 ಕೌಂಟರ್ ತೆರೆಯಲಾಗಿದೆ. ಭಕ್ತರ ವಸತಿಗಾಗಿ ಸುಕ್ಷೇತ್ರ, ತಿಪಟೂರು ಶಾಲೆಗಳು, ಮಠದ ಕೊಠಡಿಗಳು, ಸಮೀಪದ ವಸತಿ ಗೃಹಗಳನ್ನು ಕಾಯ್ದಿರಿಸಲಾಗಿದೆ. ಕುಡಿಯುವ ನೀರು, ವಿಶ್ರಾಂತಿಗೆ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ.

ತಿಪಟೂರಿನಿಂದ ಜನರನ್ನು ಕರೆದೊಯ್ಯಲು ಎಪಿಎಂಸಿ, ಬಸ್ ನಿಲ್ದಾಣ, ಉರ್ದು ಶಾಲೆ ಬಳಿ ಬಸ್ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.