ADVERTISEMENT

‘ಸುಶಿಕ್ಷಿತ ಯುವ ಜನಾಂಗ ದೇಶದ ಸಂಪತ್ತು’

ಸೇಂಟ್‌ ಅಲೋಶಿಯಸ್ ಕಾಲೇಜಿನ ಎಂಟನೇ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಮೇ 2018, 11:06 IST
Last Updated 26 ಮೇ 2018, 11:06 IST

ಮಂಗಳೂರು: ಯುವ ಜನಾಂಗ ದೇಶದ ಸಂಪತ್ತು. ಸುಶಿಕ್ಷಿತ ಯುವಕರನ್ನು ತಯಾರಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಕೊಲ್ಕತ್ತಾದ ಸೇಂಟ್‌ ಝೇವಿಯರ್‌ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ರೆ.ಡಾ. ಸೆಬಾಸ್ಟಿ ಎಲ್‌. ರಾಜ್‌ ಹೇಳಿದರು.

ನಗರದ ಸೇಂಟ್‌ ಅಲೋಶಿಯಸ್‌ ಕಾಲೇಜಿನ ಲೊಯಲಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಸೇಂಟ್‌ ಅಲೋಶಿಯಸ್‌ (ಸ್ವಾಯತ್ತ) ಕಾಲೇಜಿನ ಎಂಟನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಇದು ಕೇವಲ ಅಂಕಗಳ ಯುಗವಲ್ಲ. ಜತೆಗೆ ಜ್ಞಾನ, ಕೌಶಲ ವನ್ನೂ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಕೌಶಲ ಗಳ ಬೆಳವಣಿಗೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ದೇಶದ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಮಹತ್ತರವಾಗಿದೆ. ಇಂದಿನ ಯುವಕರೇ ನಾಳೆಯ ನಾಯಕರು. ಸಮಯ ಅಮೂಲ್ಯವಾದುದು. ವ್ಯರ್ಥ ಸಮಯ ಕಳೆಯುವುದು ಬಹುದೊಡ್ಡ ನಷ್ಟ. ಸಮಯವನ್ನು ರಚನಾತ್ಮಕ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸೇಂಟ್‌ ಅಲೋಶಿಯಸ್‌ ಕಾಲೇಜು ಸುದೀರ್ಘ ಇತಿಹಾಸ ಹೊಂದಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ತನ್ನದೇ ಆದ ಛಾಪನ್ನು ಹೊಂದಿದೆ ಎಂದರು.

ಮಂಗಳೂರು ಜೆಸ್ವಿಟ್ ಎಜುಕೇಶನಲ್ ಸೊಸೈಟಿಯ ಮಂಗಳೂರು ಪ್ರಾಂತ್ಯದ ಅಧ್ಯಕ್ಷರಾದ ರೆ. ಫಾ. ಸ್ಟಾನಿ ಸ್ಲೋಸ್ ಡಿಸೋಜ ಮಾತನಾಡಿ, ಯುವಕರು ರಚನಾತ್ಮಕ ಚಟುವಟಿಕೆಗಳ ಮೂಲಕ ಸಮುದಾಯದ ಭಾಗವಾಗಿ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಸೇಂಟ್‌ ಅಲೋಶಿಯಸ್ ಸಮೂಹ ವಿದ್ಯಾ ಸಂಸ್ಥೆಗಳ ರೆಕ್ಟರ್‍ ಫಾ. ಡೈನೀಶಿಯಸ್ ವಾಜ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್‌ ಮಾರ್ಟಿಸ್‌ ಸ್ವಾಗತಿಸಿದರು. ಕುಲಸಚಿವ ಡಾ.ಎ.ಎಂ. ನರಹರಿ, ರೆ.ಫಾ. ಪ್ರದೀಪ್‌ ಸಿಕ್ವೇರಾ, ಉಪ ಪ್ರಾಂಶುಪಾಲರು, ಡೀನ್‌ಗಳು, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.