ADVERTISEMENT

ಸೇತುವೆ ಜಲಾವೃತ: ಸಂಚಾರಕ್ಕೆ ಪರದಾಟ

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST
ಸೇತುವೆ ಜಲಾವೃತ: ಸಂಚಾರಕ್ಕೆ ಪರದಾಟ
ಸೇತುವೆ ಜಲಾವೃತ: ಸಂಚಾರಕ್ಕೆ ಪರದಾಟ   

ಬಳ್ಳಾರಿ: ಶನಿವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ ಜಲಾವೃತವಾಗಿರುವ ನಗರದ ಸತ್ಯನಾರಾಯಣಪೇಟೆ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿನ ನೀರನ್ನು  ಹೊರಹಾಕಲಾಗುತ್ತಿದ್ದು, 36 ಗಂಟೆ ಕಳೆದರೂ ನೀರು ಕಡಿಮೆಯಾಗದೆ  ಸಂಚಾರಕ್ಕೆ ಅಡಚಣೆಯಾಗಿದೆ.

ಮಳೆಯಿಂದ ಹರಿದು ಬಂದ ನೀರು ಸುಮಾರು 12 ಅಡಿಗಳಷ್ಟು ಸಂಗ್ರಹಗೊಂಡಿದೆ. ಅಗ್ನಿಶಾಮಕ ದಳ, ಮಹಾನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿ  ನೀರನ್ನು ಹೊರಹಾಕುವ ಕಾರ್ಯ ಆರಂಭಿಸ್ದ್ದಿದಾರೆ. ಭಾನುವಾರ ಬೆಳಿಗ್ಗೆಯಿಂದ ಈವರೆಗೆ ಕೇವಲ 5 ಅಡಿ ನೀರನ್ನು  ಖಾಲಿ ಮಾಡಲಾಗಿದೆ. ಮಳೆ ನೀರಿನ ಜತೆ ಚರಂಡಿ ನೀರೂ ಹರಿದು ಬಂದಿರುವುದರಿಂದ ಗಬ್ಬು ವಾಸನೆ ಹರಡಿದೆ.

ಇನ್ನೂ ಅಂದಾಜು 6ರಿಂದ 7 ಅಡಿ ನೀರು ಇದ್ದು, ಮಹಾನಗರ ಪಾಲಿಕೆಯ ಮೂರು ಮೋಟರ್, ಅಗ್ನಿಶಾಮಕ ದಳದ ಎರಡು ಮೋಟರ್‌ಗಳಿಂದ ನೀರನ್ನು ಎತ್ತಲಾಗುತ್ತಿದೆ. ಮಂಗಳವಾರ ಮುಂಜಾನೆಯ ಹೊತ್ತಿಗೆ ನೀರನ್ನೆಲ್ಲ ತೆರವುಗೊಳಿಸಲಾಗುವುದು ಎಂದು ಅಗ್ನಿಶಾಮಕದ ದಳದ ಅಧಿಕಾರಿ ತಿಪ್ಪೇಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಕಳೆದ ವರ್ಷದ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಿರುವ ಈ ಕೆಳ ಸೇತುವೆ, ಇದೀಗ ಮಳೆಯಿಂದ ಸಂಪೂರ್ಣ ಜಲಾವೃತವಾಗಿದೆ.

ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಸುರಿದಲ್ಲಿ ಮತ್ತೆ ಈ ರೀತಿಯ ಸಮಸ್ಯೆ ಮರುಕಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಜನತೆ ಕೋರಿದ್ದಾರೆ.

ಸ್ಥಳೀಯ ನೆಹರೂ ಕಾಲೊನಿ, ಬಸವೇಶ್ವರ ನಗರ, ರೇಣುಕಾಚಾರ್ಯ ನಗರ, ಗಾಂಧಿನಗರ, ಸಂಗನಕಲ್ಲು, ಕಪಗಲ್ಲು ಕಡೆ ಸುಲಭವಾಗಿ ಸಾಗಲು ಈ ಸೇತುವೆಯನ್ನೇ ಬಳಸುತ್ತಿದ್ದ ವಾಹನ ಸವಾರರು, ಕನಕ ದುರ್ಗಮ್ಮ ದೇವಸ್ಥಾನದ ಬಳಿಯಿಂದ ಹೊರಟಿರುವುದರಿಂದ ವಾಹನ ದಟ್ಟಣೆ ಅಧಿಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.