ADVERTISEMENT

ಸೋನಿಯಾಗೆ ನೈತಿಕ ಹಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ಸೋನಿಯಾ ಗಾಂಧಿ ಅವರು ರಾಜ್ಯದ ಬರ ಪರಿಸ್ಥಿತಿಯ ಕುರಿತು ಮಾತನಾಡದೆ, ಚುನಾವಣೆ  ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ನ ಯಾವೊಬ್ಬ ನಾಯಕರಿಗೂ ನೈತಿಕ ಹಕ್ಕಿಲ್ಲ ಎಂದು  ಕಿಡಿಕಾರಿದರು.

ಕೇಂದ್ರ ಯುಪಿಎ ಸರ್ಕಾರವು ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80 ಸಾವಿರ ಕೋಟಿ ರೂಪಾಯಿ ನೆರವು ನೀಡಿರುವುದಾಗಿ ಸೋನಿಯಾ ಹೇಳಿದ್ದಾರೆ. ಆದರೆ ರಾಜ್ಯದ ಜನ ತೆರಿಗೆ ರೂಪದಲ್ಲಿ ವಾರ್ಷಿಕ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ಕಟ್ಟುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ನೀಡಿರುವ ಹಣ ಕಡಿಮೆ ಎಂದರು.
 
ತನಿಖೆಯಾಗಲಿ: ರಾಜ್ಯದಲ್ಲಿ ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ 600 ಕೋಟಿ ರೂಪಾಯಿ ಹಗರಣದ ಸಂದರ್ಭ ಇಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಈ ಹಗರಣದ ಕುರಿತು ಮುಕ್ತ  ತನಿಖೆಯಾಗಬೇಕು ಎಂದು ಎಚ್‌ಡಿಕೆ ಒತ್ತಾಯಿಸಿದರು. ಬೆಳಗಾವಿಯ ಸುವರ್ಣ ಸೌಧದ ನಿರ್ಮಾಣದಲ್ಲೂ ಅವ್ಯವಹಾರವಾಗಿದ್ದು, ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

`ಶೆಟ್ಟರ್ ಹಾಗೂ ಕುಮಾರಸ್ವಾಮಿ ರಹಸ್ಯ ಕಾರ್ಯಸೂಚಿ ಹೊಂದಿದ್ದಾರೆ~ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದಾರೆ. ಈ ಹಿಂದೆ ಅವರು ಸದಾನಂದಗೌಡರ ವಿರುದ್ಧವೂ ಹೀಗೆ ಆರೋಪ ಮಾಡಿ ಅವರನ್ನು ಕುರ್ಚಿಯಿಂದ ಕೆಳಗಿಳಿಸಿದ್ದರು. ಈಗ ಶೆಟ್ಟರ್‌ರನ್ನು ಕೆಳಗಿಳಿಸಲು ಈ ರೀತಿ ತಂತ್ರ ಹೆಣೆಯುತ್ತಿದ್ದಾರೆ ಎಂದು ಕಿಡಿಕಾರಿದರು. ಜೆಡಿಎಸ್ ಮುಂದೆಂದೂ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

ರಾಜ್ಯದಾದ್ಯಂತ ಅನೇಕ ಮುಖಂಡರು ಜೆಡಿಎಸ್‌ಗೆ  ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ ಆಪರೇಶನ್ ಕಮಲ ಮೂಲಕ ಪಕ್ಷದಿಂದ ಹೊರಹೋದ ಶಾಸಕರನ್ನು ಯಾವುದೇ ಕಾರಣಕ್ಕೂ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.