ADVERTISEMENT

ಹನೂರಿನಲ್ಲಿ ಇಂದು ಗಡಿನಾಡ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

ಚಾಮರಾಜನಗರ:  ಕೊಳ್ಳೇಗಾಲ ತಾಲ್ಲೂಕಿನ ಹನೂರು ಪಟ್ಟಣದಲ್ಲಿ ಮಾರ್ಚ್ 24 ಹಾಗೂ 25ರಂದು ಗಡಿನಾಡ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಜಿಲ್ಲಾಡಳಿತ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಅರ್ಥಪೂರ್ಣವಾಗಿ ಉತ್ಸವ ನಡೆಸಲು ಶ್ರೀಮಹದೇಶ್ವರ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಮೂರು ಸಾವಿರ ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

24ರಂದು ಬೆಳಿಗ್ಗೆ 11.30ಗಂಟೆಗೆ ಹಿರಿಯ ಕವಿ ಚನ್ನವೀರ ಕಣವಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಆರ್. ನರೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್, ಹನೂರು ಪ.ಪಂ. ಅಧ್ಯಕ್ಷೆ ಪುಟ್ಟಮ್ಮ, ಜಿ.ಪಂ. ಅಧ್ಯಕ್ಷೆ ಕೆ. ರಾಜೇಶ್ವರಿ ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

25ರಂದು ಸಂಜೆ 5.30ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಸದ ಆರ್. ಧ್ರುವನಾರಾಯಣ ಸಮಾರೋಪ ಭಾಷಣ ಮಾಡಲಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರು, ಗಣ್ಯರು, ಅತಿಥಿಗಳಿಗೆ ಎರಡು ದಿನಗಳ ಕಾಲ ಸಕಾಲಕ್ಕೆ ತಿಂಡಿ, ಊಟ ಪೂರೈಸಲು ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯ ಕಲಾ ತಂಡಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಸಮಾರಂಭದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿದ್ದು, ಪರಿಸರಸ್ನೇಹಿ ವಸ್ತು ಬಳಸಲು ಸೂಚಿಸಲಾಗಿದೆ.

ಹನೂರು ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸವಕ್ಕೆ ಬರಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಉತ್ಸವದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ, ಗಡಿ ಸಮಸ್ಯೆ, ಹೊಗೇನಕಲ್ ವಿವಾದ ಇತ್ಯಾದಿ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.