ADVERTISEMENT

ಹಬ್ಬದ ಖರೀದಿಗೆ ಮುಗಿಬಿದ್ದ ಜನತೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 19:30 IST
Last Updated 3 ಏಪ್ರಿಲ್ 2011, 19:30 IST
ಹಬ್ಬದ ಖರೀದಿಗೆ ಮುಗಿಬಿದ್ದ ಜನತೆ
ಹಬ್ಬದ ಖರೀದಿಗೆ ಮುಗಿಬಿದ್ದ ಜನತೆ   

ಚಿತ್ರದುರ್ಗ: ಯುಗಾದಿ ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಮುಖ್ಯರಸ್ತೆಗಳ ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜನಿಕರು ಹಬ್ಬದ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು.

ಹಬ್ಬದ ಆಚರಣೆಗಾಗಿ ಅಗತ್ಯ ವಸ್ತುಗಳ ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ಲೆಕ್ಕಿಸದೇ ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸಿದರು.

ಮಹಾತ್ಮಗಾಂಧಿ ರಸ್ತೆ, ತರಕಾರಿ ಮಾರುಕಟ್ಟೆ, ಲಕ್ಷ್ಮೀಬಜಾರ್ ರಸ್ತೆಗಳ ಇಕ್ಕೆಲಗಳಲ್ಲಿ ಜನಜಂಗುಳಿ ಜಮಾಯಿಸಿತ್ತು. ಅಂಗಡಿ ಮುಗ್ಗಟ್ಟುಗಳ ವರ್ತಕರು ಹಾಗೂ ರಸ್ತೆ ಬದಿಯ ಬಟ್ಟೆ, ಹೂವು, ಹಣ್ಣು, ಯುಗಾದಿ ಉಡುದಾರ, ಮಾವಿನಸೊಪ್ಪು, ಬೇವಿನಸೊಪ್ಪು, ಬಾಳೆಎಲೆ ಸೇರಿದಂತೆ ಇತರೆ ವ್ಯಾಪಾರಸ್ಥರು ಭರ್ಜರಿ ವ್ಯಾಪಾರ ನಡೆಸಿದರು.

ನಗರದ ಸಾರ್ವಜನಿಕರು ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಆಗಮಿಸಿದ ಗ್ರಾಮಸ್ಥರು ಅಗತ್ಯ ವಸ್ತುಗಳನ್ನು ಖರೀದಿಸಿದರು.

ಭಾನುವಾರ ಯುಗಾದಿ ಅಮಾವಾಸ್ಯೆ ಇದ್ದ ಕಾರಣ ಕೆಲವರು ತಮ್ಮ ಬಳಕೆಯ ಆಟೋರಿಕ್ಷಾ, ಕಾರು, ದ್ವಿಚಕ್ರ ವಾಹನಗಳನ್ನು ಶುಭ್ರಗೊಳಿಸಿ ಸಮೀಪದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿದರು.

ವಿಶೇಷವಾಗಿ ಮಹಿಳೆಯರು ಹಾಗೂ ಯುವತಿಯರು ಬಟ್ಟೆಗಳಿಗೆ ತಕ್ಕಂತೆ ಅಲಂಕಾರಿಕ, ಸೌಂದರ್ಯ ವರ್ಧಕ ವಸ್ತುಗಳ ಹುಡುಕಾಟದಲ್ಲಿ ತೊಡಗಿದ್ದರು. ಫ್ಯಾನ್ಸಿ, ಬಳೆ ಅಂಗಡಿಗಳು ಜನರಿಂದ ಭರ್ತಿಯಾಗಿದ್ದವು.

ಯುಗಾದಿ ಹಬ್ಬದ ಅಂಗವಾಗಿ ಬಟ್ಟೆ ಹಾಗೂ ಗೃಹೋಪಯೋಗಿ ಮಳಿಗೆಗಳಲ್ಲಿ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿತ್ತು.

ಸಿದ್ಧಉಡುಪು ಹಾಗೂ ಬಟ್ಟೆ ಅಂಗಡಿಗಳಲ್ಲಿ ಚಿಣ್ಣರು, ಮಕ್ಕಳು, ಯುವಕರು, ಪುರುಷರು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ವಹಿವಾಟು ನಡೆಸಿದರು. ಕೆಲ ಬಟ್ಟೆ ಅಂಗಡಿಗಳ ವರ್ತಕರು ಬರುವ ಗಿರಾಕಿಗಳಿಗೆ ಬಟ್ಟೆ ತೋರಿಸಲಾಗದೇ ಅರ್ಧ ಬಾಗಿಲು ಮುಚ್ಚಿ ವ್ಯಾಪಾರ ನಡೆಸಿದರು.

ಮಹಾತ್ಮಗಾಂಧಿ ವೃತ್ತದ ಸುತ್ತಮುತ್ತ ರಸ್ತೆಗಳಲ್ಲಿ ಜನಜಂಗುಳಿ ಸೇರಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸಂಚಾರಿ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪರದಾಡಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.