ADVERTISEMENT

ಹರಳಯ್ಯ-ಮಾದರಸರ ಹುತಾತ್ಮ ದಿನಾಚರಣೆಗೆ ಅಡ್ಡಿಪಡಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾದಿಂದ ಮಾರ್ಚ್ 5 ಮತ್ತು 6ರಂದು ಬಸವಕಲ್ಯಾಣದಲ್ಲಿ ಆಯೋಜಿಸಿದ ಹರಳಯ್ಯ-ಮಾದರಸರ ಹುತಾತ್ಮ ದಿನಾಚರಣೆ ನಡೆಯದಂತೆ ಕೆಲವು ಲಿಂಗಾಯತ ಮಠಾಧೀಶರು ಹುನ್ನಾರ ನಡೆಸಿದ್ದಾರೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶನಿವಾರ ಇಲ್ಲಿ ಆರೋಪಿಸಿದರು.

 ಸ್ಲಂ ಜನಾಂದೋಲನ- ಕರ್ನಾಟಕ ಸಂಘಟನೆಯಿಂದ ನಡೆದ ‘ಕೊಳೆಗೇರಿ ಮುಕ್ತ ನಗರಗಳ ಮುಖವಾಡದ ಹಿಂದೆ ಅಸ್ಪೃಶ್ಯತೆ ಆಚರಣೆ’ ಕುರಿತ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತ ಸಮುದಾಯದಲ್ಲಿ ಆತ್ಮವಿಶ್ವಾಸ ತುಂಬವ ಇಂತಹ ಮಹತ್ವದ, ಅಪರೂಪದ ಕೆಲಸವನ್ನು ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಭೀಮಣ್ಣ ಖಂಡ್ರೆ ಆಯೋಜಿಸಿದ್ದಾರೆ. ಇದನ್ನು ವಿರೋಧಿಸಿರುವ ಕೆಲವರು ಈ ಕಾರ್ಯಕ್ರಮ ನಡೆಯದಂತೆ, ಯಶಸ್ಸು ಸಿಗದಂತೆ ತಡೆಯಲು ಪಿತೂರಿ ನಡೆಸುತ್ತಿದ್ದಾರೆ ಎಂದರು.

ADVERTISEMENT

ಮುರುಘಾಮಠ ಇತರೆ ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳ ಜತೆ ಈ ಕುರಿತು ಚರ್ಚಿಸಿದ್ದು, ಎಲ್ಲ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಎಲ್ಲ ಶೋಷಿತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ಸು ಮಾಡಬೇಕು ಎಂದು ಕರೆ ನೀಡಿದರು.

’ನಾವು ಎಲ್ಲಾದರೂ ಹೊರಗೆ ಹೋದರೆ ಹೊಲೇರ ಸ್ವಾಮೀಜಿ ಬಂದರು ಎಂದು ಕರೆಯುತ್ತಾರೆ. ಜನತೆ ಹಾಗೆ ಕರೆದರೆ ನಮಗೆ ಸಂತಸವಾಗುತ್ತದೆ. ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್ ಕೂಡ ಇದೇ ರೀತಿ ಶೋಷಿತರ ಪರವಾಗಿ ಕೆಲಸ ಮಾಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ನಾವು ಕೂಡ ಕೇವಲ ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಹಿಂದುಳಿದ ಎಲ್ಲ ಸಮುದಾಯಗಳ ಬೆಳವಣಿಗೆ ಬಗ್ಗೆ ಚಿಂತನೆ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.