ADVERTISEMENT

ಹರೇಕಳ: ನಿವೇಶನ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಮುಡಿಪು: ಹರೇಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿ ಲಭ್ಯವಿದೆ. ಆದರೂ ನಿವೇಶನರಹಿತ ಬಡವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಪಂಚಾಯಿತಿ ಕೇವಲ ಭ್ರಷ್ಟಾಚಾರದಲ್ಲೇ ತೊಡಗಿದೆ ಎಂದು ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಮುನೀರ್ ಕಾಟಿಪಳ್ಳ ದೂರಿದರು.

ನಿವೇಶನರಹಿತರಿಗೆ ಮನೆ ಹಾಗೂ ಹಕ್ಕುಪತ್ರ ಒದಗಿಸಿಕೊಡುವಂತೆ ಆಗ್ರಹಿಸಿ ಹರೇಕಳ ಗ್ರಾಮ ಪಂಚಾಯಿತಿ ಮುಂಭಾಗ ಹರೇಕಳ ಗ್ರಾಮ ನಿವೇಶನರಹಿತರ ಹೋರಾಟ ಸಮಿತಿ ವತಿಯಿಂದ ಸೊಮವಾರ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ನಿವೇಶನರಹಿತರು ಸ್ವಂತ ಸೂರಿಲ್ಲದೇ ಅಧಿಕ ಬಾಡಿಗೆ ಕೊಟ್ಟು ಬಾಡಿಗೆ ಮನೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಾಗಿದ್ದ ಸ್ಥಳೀಯ ಶಾಸಕ ಯು.ಟಿ.ಖಾದರ್ ನಿವೇಶನರಹಿತರ ಸಮಸ್ಯೆ  ಬದಿಗೊತ್ತಿ ಶ್ರೀಮಂತರ ಬಂಗಲೆ ಹಾಗೂ ವಾಣಿಜ್ಯ ಸಂಕೀರ್ಣಗಳ ಭೂಮಿ ಪೂಜೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ವ್ಯಂಗ್ಯ  ವಾಡಿದರು.
 

ಪ್ರತಿಭಟನೆಯಲ್ಲಿ ಹರೇಕಳ ಡಿವೈಎಫ್‌ಐ ಘಟಕದ ರಫೀಕ್ ಹರೇಕಳ, ಜೀವನ್ ತೊಕ್ಕೊಟ್ಟು, ಉಮರಬ್ಬ ನ್ಯೂ ಪಡ್ಪು, ಸೆಕಿನಾ ಮಹ್ಮದಾಳಿ, ಇಸ್ಮಾಯಿಲ್ ಹರೇಕಳ, ಪದ್ಮನಾಭ ಸಾಲಿಯಾನ್, ಅಶ್ರಫ್ ಹರೇಕಳ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT