ADVERTISEMENT

ಹಲ್ಲೆಗೆರೆ ಬಳಿ ಬಸ್ ಪಲ್ಟಿ: 20 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಬ್ಬಿನ ಗದ್ದೆಗೆ ಮಗುಚಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಒಬ್ಬರಿಗೆ ಗಂಭೀರ ಸ್ವರೂಪದಲ್ಲಿ ಪೆಟ್ಟು ಬಿದ್ದಿರುವ ಘಟನೆ ತಾಲ್ಲೂಕಿನ ಹಲ್ಲೆಗೆರೆ ಸಮೀಪ ಸೋಮವಾರ ಸಂಭವಿಸಿದೆ.

`ಶ್ರೀ ಭಗವತಿ~ ಬಸ್ ಮಂಡ್ಯದಿಂದ ಹಲ್ಲೆಗೆರೆ ಮಾರ್ಗವಾಗಿ ಮದ್ದೂರು ತಾಲ್ಲೂಕಿನ ಕೊಪ್ಪ ಕಡೆಗೆ ತೆರಳುತ್ತಿತ್ತು. ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿದ್ದರು. ಹಲ್ಲೆಗೆರೆ ಬಳಿ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ಉರುಳಿತು.

ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಚಂದನ್‌ಗೌಡ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಯಿತು. ಬಹುತೇಕ ಗಾಯಾಳುಗಳಿಗೆ ಸ್ಥಳೀಯ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ಚಾಲಕ ಮತ್ತು ನಿರ್ವಾಹಕರಿಬ್ಬರೂ ಸ್ಥಳದಿಂದ ಪಲಾಯನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಪ್ರಯಾಣಿಕರ ರಕ್ಷಣೆಗೆ ನೆರವಾದರು.

ಅಲ್ಪ ಪ್ರಮಾಣದ ಗಾಯಗಳಾಗಿದ್ದವರಿಗೆ ಕೆರೆಗೋಡು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚು ಗಾಯಗೊಂಡ ನಟರಾಜ್, ಕಿಶೋರ್, ಸಾಗರ, ಲಿಂಗರಾಜು, ಪೂಜಾ, ಸಿಂಚನಾ, ರಾಜಶ್ರೀ ಮತ್ತಿತರರನ್ನು ಜಿಲ್ಲಾಸ್ಪತ್ರೆಗೆ ಕರೆದು ತರಲಾಯಿತು.

ಕೆರೆಗೋಡು ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಚನ್ನಬಸವಣ್ಣ, ಸಿಪಿಐ ಕಾಂತರಾಜು ಭೇಟಿ ನೀಡಿದ್ದರು. ರಸ್ತೆ ಪೂರ್ತಿ ಹದಗೆಟ್ಟಿರುವುದು ಕೂಡಾ ಈ ಘಟನೆಗೆ ಕಾರಣ ಎಂಬ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.