ADVERTISEMENT

ಹಾಕಿ ಕ್ರೀಡೆಗೆ ಪ್ರೋತ್ಸಾಹ ಅಗತ್ಯ: ಕಾರಬಾರಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೀದರ್: ಕ್ರೀಡೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಜಿಲ್ಲೆಯಲ್ಲಿ ಹಾಕಿ ಮತ್ತಿತರ ಟೂರ್ನಮೆಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಬುರಾವ್ ಕಾರಬಾರಿ ನುಡಿದರು.

ಗುರುನಾನಕರು ಬೀದರ್‌ಗೆ ಭೇಟಿ ನೀಡಿದ 500ನೇ ವರ್ಷಾಚರಣೆಯ ಪ್ರಯುಕ್ತ ಗುರುನಾನಕ್ ಝೀರಾ ಫೌಂಡೇಷನ್ ಏರ್ಪಡಿಸಿರುವ ರಾಷ್ಟ್ರಮಟ್ಟದ ಗುರುನಾನಕ್ ದೇವ್ ಹಾಕಿ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಪಂದ್ಯಾವಳಿಗಳನ್ನು ಆಯೋಜಿಸುವುದರಿಂದ ಕ್ರೀಡಾಪಟುಗಳಿಗೆ ವೇದಿಕೆ ದೊರೆಯುತ್ತದೆ. ಕ್ರೀಡಾಭಿಮಾನಿಗಳಿಗೆ ಅದರ ಸವಿ ಅನುಭವಿಸಲು ಅನುಕೂಲವಾಗುತ್ತದೆ. ಹೊಸ ಕ್ರೀಡಾಪಟುಗಳು ಹುಟ್ಟಿಕೊಳ್ಳಲು ಪ್ರೇರಣೆ ಆಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಕ್ರೀಡೆ ಹಾಕಿಗೆ ಸಿಗಬೇಕಾದ ಪ್ರಾಧಾನ್ಯತೆ ದೊರೆಯುತ್ತಿಲ್ಲ ಎಂದು ವಿಷಾದಿಸಿದ ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ಎ.ಬಿ. ಸುಬ್ಬಯ್ಯ `ಹಾಕಿಯಂತಹ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕಲ್ಪಿಸುವ ಅಗತ್ಯವಿದೆ~ ಎಂದು ಹೇಳಿದರು.

ಬೀದರ್‌ನಲ್ಲಿ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಿರುವುದು ಸಂತಸದ ಸಂಗತಿ. ಮೂಲಸೌಕರ್ಯಗಳ ಕೊರತೆಯ ನಡುವೆ ಬೀದರ್‌ನಲ್ಲಿ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ನಡೆಯುತ್ತಿರುವುದು ಸಂತಸ ಉಂಟು ಮಾಡಿದೆ. ದೇಶೀಯ ಕ್ರೀಡೆಗಳಿಗೆ ಉತ್ತೇಜನ ನೀಡುವ ಕೆಲಸ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುನಾನಕ್ ಝೀರಾ ಫೌಂಡೇಷನ್ ಅಧ್ಯಕ್ಷ ಸರ್ದಾರ್ ಬಲಬೀರ್‌ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರೇಷ್ಮಾ ಕೌರ್, ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ವಿ.ಡಿ. ಮೈತ್ರಿ, ಗುರುನಾನಕ್ ಝೀರಾ ಫೌಂಡೇಷನ್ ಉಪಾಧ್ಯಕ್ಷ ವರಿಯಂಸಿಂಗ್, ಸದಸ್ಯ ಪ್ರೀತಮ್‌ಸಿಂಗ್ ಉಪಸ್ಥಿತರಿದ್ದರು.

ಹಾಕಿ ಪಂದ್ಯಾವಳಿಯ ಕಾರ್ಯದರ್ಶಿ ಜಗತಾರಸಿಂಗ್ ಸ್ವಾಗತಿಸಿದರು. ರಾಜಶೇಖರ ಗಾಯತೊಂಡ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.