
ಹಾಸನ: ತಾಲ್ಲೂಕಿನ ಎರಡು ಕಡೆ ಭಾನುವಾರ ಅಗ್ನಿ ದುರಂತ ಸಂಭವಿಸಿದೆ. ಒಂದೆಡೆ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ತೋಪಿಗೆ ಬೆಂಕಿ ಬಿದ್ದಿದ್ದರೆ, ಇನ್ನೊಂದೆಡೆ ಖಾಸಗಿ ವ್ಯಕ್ತಿಗೆ ಸೇರಿದ ಕೋಳಿ ಫಾರಂನ ಹಳೆಯ ಕಟ್ಟಡ ಹಾಗೂ ಸುಮಾರು 15 ತೆಂಗಿನ ಮರಗಳು ಹಾನಿಗೊಳಗಾಗಿವೆ.
ಶಾಂತಿಗ್ರಾಮ ಸಮೀಪದ ಹೊಂಗೆರೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ನೀಲಗಿರಿ ತೋಪಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ತೋಪಿನಲ್ಲಿ ಒಣಗಿದ ನೀಲಗಿರಿ ಎಲೆಗಳು ಇದ್ದ ಕಾರಣ ಬೆಂಕಿ ವೇಗವಾಗಿ ಪಸರಿಸಿದೆ. ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ವಾಚರ್ ಬೆಂಕಿ ಆರಿಸುವ ಯತ್ನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
`ಹೊಂಗೆರೆಯಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಿಲ್ಲ, ಅರಣ್ಯದ ಅಂಚಿನಲ್ಲಿ ಇರುವ ಗಿಡಗಂಟಿಗಳಿಗೆ ಹಚ್ಚಿದ ಬೆಂಕಿ ಹಬ್ಬಿ ಒಣಗಿದ ಎಲೆಗಳು ಸುಟ್ಟಿವೆ. ದೊಡ್ಡ ಹಾನಿಯೇನೂ ಸಂಭವಿಸಿಲ್ಲ~ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಗಾಡೇನಹಳ್ಳಿಯಲ್ಲೂ ಬೆಂಕಿ ಆಕಸ್ಮಿಕ ಸಂಭವಿಸಿ ಗಾಡ್ವಿನ್ ಕಿರಣ್ ಅವರಿಗೆ ಸೇರಿದ ಸೊತ್ತು ನಾಶವಾಗಿ ಸಾಕಷ್ಟು ಹಾನಿ ಉಂಟಾಗಿದೆ. ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.