ADVERTISEMENT

ಹುಬ್ಬಳ್ಳಿ: ಇಂದಿನಿಂದ ಪ್ಲಾಸ್ಟಿಕ್ ನಿಷೇಧ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಹುಬ್ಬಳ್ಳಿ: `ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಗುರುವಾರ (ತಾ.16)ದಿಂದಲೇ ಆರಂಭವಾಗುತ್ತದೆ~ ಎಂದು ಮಹಾನಗರ ಪಾಲಿಕೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಬುಧವಾರ ಇಲ್ಲಿ ತಿಳಿಸಿದರು.ಪ್ಲಾಸ್ಟಿಕ್ ನಿಷೇಧ  ಕುರಿತು ನಗರದ ಪ್ಲಾಸ್ಟಿಕ್ ಉತ್ಪಾದಕರು, ವಿತರಕರ ಜೊತೆ  ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

`ಪ್ಲಾಸ್ಟಿಕ್ ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ಜಾರಿಯಲ್ಲಿದೆ. ಇದನ್ನು ಗುರುವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಅಗತ್ಯಬಿದ್ದರೆ ಕಾರ್ಯಾಚರಣೆಗೆ ಪೊಲೀಸರ ನೆರವನ್ನೂ ಪಡೆಯುತ್ತೇವೆ~ ಎಂದರು.
`ಸಮಾಜದ ಹಿತದೃಷ್ಟಿಯಿಂದ, ಪರಿಸರ ರಕ್ಷಣೆಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.
 
ಹೊರರಾಜ್ಯಗಳಿಂದ ಬರುವ ಪ್ಲಾಸ್ಟಿಕ್‌ಗೆ ಸಂಬಂಧಿಸಿದ ವಸ್ತುಗಳನ್ನು ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ. ಕೇವಲ ಪ್ಲಾಸ್ಟಿಕ್ ಚೀಲಗಳಲ್ಲದೆ ಚಹಾ, ಕಾಫಿಗಾಗಿ ಬಳಸುವ ಪ್ಲಾಸ್ಟಿಕ್ ಕಪ್‌ಗಳನ್ನು ಕೂಡಾ ನಿಷೇಧಿಸಲಾಗುತ್ತದೆ.

`40 ಮೈಕ್ರಾನ್‌ಗಿಂತಲೂ ಕಡಿಮೆ ಗಾತ್ರದ ಪ್ಲಾಸ್ಟಿಕ್ ಚೀಲಗಳಗಳನ್ನು ಸಗಟು ಮಾರಾಟಗಾರರು ಮತ್ತು ಅಂಗಡಿಕಾರರು ಬಳಸುವುದು ನಿಯಮಬಾಹಿರ. ಮುಖ್ಯವಾಗಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಬಾರದು~ ಎಂದು ಕೋರಿದರು.

ಕರ್ನಾಟಕ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮೋಹನ ಟೆಂಗಿನಕಾಯಿ, `ಈಗಿರುವ ಸ್ಟಾಕ್ ಮುಗಿದ ಮೇಲೆ ನಿಷೇಧ ಹೇರಿ. ಅಲ್ಲಿಯವರೆಗೆ ಕಾಲಾವಕಾಶ ಕೊಡಿ~ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಆಯುಕ್ತರು ಒಪ್ಪಲಿಲ್ಲ.

ಸಭೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರ ಅಳಗುಂಡಗಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಪಿ.ಎನ್. ಬಿರಾದಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಬಿ. ರುದ್ರೇಶ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಫೀಕ್, ಪರಿಸರ ಎಂಜಿನಿಯರ್ ಕೆ.ಎಸ್. ನಯನಾ ಮೊದಲಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.