ADVERTISEMENT

ಹುಲಿ ಯೋಜನೆ ವಿರೋಧ-ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 19:30 IST
Last Updated 7 ಆಗಸ್ಟ್ 2012, 19:30 IST

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಣಾ ಯೋಜನೆ ಕುರಿತಂತೆ ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಮಾಹಿತಿ ನೀಡಿ, ಮುಂದಿನ ಪರ್ಯಾಯ ಮಾರ್ಗದ ಬಗ್ಗೆ ಜನರೊಂದಿಗೆ ಚರ್ಚಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಜಿಲ್ಲಾ ಅಧ್ಯಕ್ಷ ಎನ್.ಆರ್. ಮಂಜುನಾಥ ಆಗ್ರಹಿಸಿದ್ದಾರೆ.

ಎಐಕೆಎಸ್ ನೇತೃತ್ವದಲ್ಲಿ ಮಂಗಳವಾರ ಭದ್ರಾ ಹುಲಿ ಸಂರಕ್ಷಣಾ ಯೋಜನೆ ವಿರೋಧಿಸಿ ತರೀಕೆರೆ ತ್ಲ್ಲಾಲೂಕಿನ ಬರಗೇನಹಳ್ಳಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿ ಅವರು ಮಾತನಾಡಿದರು.ಭದ್ರಾ ಹುಲಿ ಸಂರಕ್ಷಣಾ ಯೋಜನೆ ಸಂಬಂಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಂಸದರು, ಶಾಸಕರು ಈ ಬಗ್ಗೆ ಗಮನ ಹರಿಸಿ ಕೇಂದ್ರಕ್ಕೆ ನಿಯೋಗ ತೆರಳಿ ಮನವರಿಕೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಅರಣ್ಯ ಇಲಾಖೆಯವರು ತಣಿಗೆಬೈಲು, ಮುತ್ತೋಡಿ ಸೇರಿದಂತೆ ಹಲವೆಡೆ ಕತ್ತಲಾಗುತ್ತಿದ್ದಂತೆ ವಾಹನ ಸಂಚಾರ ನಿಷೇಧಿಸಿತ್ತಾರೆ. ಇದರಿಂದ ಈ ಭಾಗದಲ್ಲಿ ಜನರ ಜೀವಕ್ಕೆ ತೊಂದರೆಯಾದರೂ ಕಾಲ್ನಡಿಗೆಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸದರು, ಶಾಸಕರು ತಮಗೆ ಸಂಬಂಧ ಇಲ್ಲದಂತಿರುವುದು ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.

ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು ಮಾತನಾಡಿ, ಜನಪ್ರತಿನಿಧಿಗಳ ಸುಳ್ಳು ಹೇಳಿಕೆಗಳಿಗೆ ಜನ ದಂಗೆ ಏಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.ಕಿಸಾನ್ ಸಭಾ ಜಿಲ್ಲಾ ಉಪಾಧ್ಯಕ್ಷ ವೇದಮೂರ್ತಿ, ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿದರು. ಮುಖಂಡರಾದ ಶಿವಕುಮಾರ್ ಗಟ್ಟಿ, ಇಂಜು, ಪಾಪಣ್ಣ, ದಿನೇಶ್ ನೇತೃತ್ವ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.