ADVERTISEMENT

ಹೆದ್ದಾರಿ ತಡೆ; ರೈತರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 9:35 IST
Last Updated 21 ಡಿಸೆಂಬರ್ 2010, 9:35 IST

ದಾವಣಗೆರೆ: ಕರ್ನಾಟಕ ಗೃಹ ಮಂಡಳಿ ಅಕ್ರಮವಾಗಿ ಭೂಸ್ವಾಧೀನ ಪಡಿಸಿಕೊಂಡಿದೆ. ಒಪ್ಪಂದದ ಪ್ರಕಾರ ನಡೆದುಕೊಳ್ಳದೆ ರೈತರಿಗೆ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಸೋಮವಾರ ಕುಂದುವಾಡದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು.

ರಾಜ್ಯ ಗೃಹ ಮಂಡಳಿ ಈ ಪ್ರದೇಶದಲ್ಲಿ ರೈತರಿಂದ ಪ್ರತಿ ಎಕರೆಗೆ ರೂ 5 ಲಕ್ಷ ಪ್ರಕಾರ 250 ಎಕರೆ ಭೂಮಿ ಖರೀದಿಸಿತ್ತು. ಆದರೆ, ವಾಸ್ತವವಾಗಿ ರೈತರಿಗೆ ಕೇವಲ ರೂ 4 ಲಕ್ಷ ಪಾವತಿಸಲಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 60-40 ಅಳತೆಯ ನಿವೇಶನ ನೀಡುವುದಾಗಿಯೂ ಮಂಡಳಿಯವರು ಭರವಸೆ ನೀಡಿದ್ದರು ಎಂದು ಪ್ರತಿಭಟನಾಕಾರರು ಹೇಳಿದರು.

ಆದರೆ ಅದಕ್ಕೆ ಒಂದೂವರೆ ಎಕರೆ ಮೇಲ್ಪಟ್ಟು ಭೂಮಿ ಕಳೆದುಕೊಂಡವರಿಗೆ ಮಾತ್ರ ಎಂಬ ನಿಬಂಧನೆ ವಿಧಿಸಲಾಗಿದೆ. ಅದಕ್ಕಿಂತ ಕಡಿಮೆ ಭೂಮಿ ಕಳೆದುಕೊಂಡವರು ಎಲ್ಲಿಗೆ ಹೋಗಬೇಕು ಎಂದು ರೈತ ಮುಖಂಡರು ಪ್ರಶ್ನಿಸಿದರು.

ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಸರ್ಕಾರ ಅಥವಾ ರೈತರು ಯಾರ ಕೈ ಮೇಲಾಗುತ್ತದೆಯೋ ನೋಡೋಣ ಎಂದು ಸವಾಲು ಹಾಕಿದರು.

ಸುಮಾರು 10 ನಿಮಿಷಗಳ ಕಾಲ ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ತಡೆದರು. ಬಳಿಕ ಪ್ರತಿಭಟನೆ ಕಾವೇರುತ್ತಿದ್ದಂತೆಯೇ ಅವರನ್ನು ಪೊಲೀಸರು ಬಂಧಿಸಿದರು.

ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್, ಪಣಿಯಾಪುರ ಲಿಂಗರಾಜ್, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಎಚ್.ಡಿ. ದೊಡ್ಡಣ್ಣ, ಗಣೇಶಪ್ಪ ದೊಡ್ಡಗೌಡರ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.