ADVERTISEMENT

ಹೆಲ್ಮೆಟ್, ಲೈಸೆನ್ಸ್ ಇಲ್ಲದೇ ಓಡಲ್ಲ, ಕುಡಿದರೆ ಮುಂದೆ ಸಾಗಲ್ಲ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಬಾಗಲಕೋಟೆ: ಈ ಬೈಕ್ ಓಡಿಸಬೇಕೆಂದರೆ ಹೆಲ್ಮೆಟ್ ಹಾಕಿಕೊಳ್ಳಲೇ ಬೇಕು, ಲೈಸೆನ್ಸ್ ಕಡ್ಡಾಯ, ಕುಡಿದು ಚಾಲನೆ ಮಾಡಲು ಹೋದರೆ ಬೈಕ್ ಸ್ಟಾರ್ಟ್ ಆಗಲ್ಲ. ಅಕಸ್ಮಾತ್ ಯಾರಾದರು ಈ ಬೈಕ್  ಕಳವು ಮಾಡಿದರೆ ತಕ್ಷಣ  ಎಚ್ಚರಿಕೆ ಗಂಟೆ (ಸೈರನ್) ಬಾರಿಸುತ್ತದೆ. ಇನ್ನ್ನೂ ವಿಶೇಷ ಏನೆಂದರೆ ಬೈಕ್ ಅಪಘಾತಕ್ಕೆ ಒಳಗಾದರೆ ತಕ್ಷಣ ಆಂಬುಲೆನ್ಸ್ ಮತ್ತು ಸಮೀಪದ ಪೊಲೀಸ್ ಠಾಣೆಗೆ ಎಸ್‌ಎಂಎಸ್ ಕೂಡ ರವಾನಿಸುತ್ತದೆ!

ಇಂತಹ ವಿಶಿಷ್ಟ ದ್ವಿಚಕ್ರ ವಾಹನವೊಂದನ್ನು ಬಾಗಲಕೋಟೆಯ ಪ್ರತಿಷ್ಠಿತ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧ ಪಡಿಸಿದ್ದಾರೆ.

`ರೋಡ್ ರೂಲ್ಸ್ ಫಾಲೋಯರ್ಸ್‌ ಮೋಟಾರ್ ಸೈಕಲ್~ ಎಂಬ ಈ ದ್ವಿಚಕ್ರ ವಾಹನ, ಸಂಚಾರ ನಿಯಮಗಳನ್ನು ತಾನೇ ಕಡ್ಡಾಯವಾಗಿ ಪಾಲಿಸುತ್ತದೆ. ಜೊತೆಗೆ ತನ್ನ ಬೆನ್ನೇರುವ ಚಾಲಕನೂ ತಪ್ಪದೇ ಸಂಚಾರ ನಿಯಮ ಪಾಲಿಸುವಂತೆ ಮಾಡುತ್ತದೆ.

ಬಿವಿವಿ ಪಾಲಿಟೆಕ್ನಿಕ್‌ನ ಆಟೊಮೊಬೈಲ್ ವಿಭಾಗದ ಮುಖ್ಯಸ್ಥ ಬಿ.ಕೆ.ದೇವಶೆಟ್ಟಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಆನಂದ ಎಸ್.ದೊಡ್ಡಿಹಾಳ, ಕೆ.ಆರ್.ಅಲ್ಬೂರ, ಎಂ.ಬಿ.ಹೂಗಾರ, ಎಸ್.ಯು.ಬನ್ನೂರ, ಎ.ಟಿ.ಕೊಠಿಮಠ ಮತ್ತು ವಿ.ಎಸ್.ರದರಡ್ಡಿ ಒಳಗೊಂಡ ತಂಡ            ಈ ನೂತನ ದ್ವಿಚಕ್ರ ವಾಹನವನ್ನು ರೂಪಿಸಿದ್ದಾರೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಆನಂದ ಎಸ್. ದೊಡ್ಡಿಹಾಳ,  `ರೋಡ್ ರೂಲ್ಸ್  ಫಾಲೋಯರ್ಸ್‌ ಮೋಟಾರ್ ಸೈಕಲ್~ಗೆ ಅಳವಡಿಸಿರುವ ಜಿಎಸ್‌ಎಂ (ಗ್ರೂಪ್ ಸಿಸ್ಟಂ ಮೊಬೈಲ್ ಕಮ್ಯುನಿಕೇಷನ್) ಮತ್ತು  `ಸೆನ್ಸರ್ ಲೈಟರ್~ ಮೂಲಕ ಇಷ್ಟೆಲ್ಲಾ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ ಎಂದು ತಿಳಿಸಿದರು.

`ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಾವು ಪ್ರಾಜೆಕ್ಟ್ ವರ್ಕ್‌ಗಾಗಿ ಇದೇ ಮಾರ್ಚ್‌ನಲ್ಲಿ ಈ ಬೈಕ್ ಅನ್ನು ಸಿದ್ಧಪಡಿಸಿದ್ದೇವೆ. ಕಾಲೇಜಿನಲ್ಲಿ ಇತ್ತೀಚೆಗೆ ನಡೆದ `ಟೆಕ್ ಉತ್ಸವ~ದಲ್ಲಿ ಇದು ಪ್ರಥಮ ಸ್ಥಾನ ಗಳಿಸಿದೆ~ ಎಂದರು.
ಈ ಬೈಕ್‌ನ ಎಂಜಿನ್ ತಯಾರಿಸಲು  ರೂ. 22,000  ವೆಚ್ಚವಾಗಿದೆ. ಯಾವುದಾದರೂ ಕಂಪೆನಿ ಈ ತಂತ್ರಜ್ಞಾನ  ಪಡೆಯಲು ಇಚ್ಛಿಸಿದರೆ ನೀಡುವುದಾಗಿ ಅವರು ತಿಳಿಸಿದರು.

 `ಸೆನ್ಸರ್ ಲೈಟರ್~ ಮತ್ತು ಜಿಎಸ್‌ಎಂ ತಂತ್ರಜ್ಞಾನವನ್ನು ಎಲ್ಲ ದ್ವಿಚಕ್ರ ವಾಹನಗಳಿಗೂ ಅಳವಡಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಪ್ರಯೋಗದ ಅಗತ್ಯವಿದೆ ಎಂದರು.

ಮಾಹಿತಿಗಾಗಿ ಬಿವಿವಿ ಪಾಲಿಟೆಕ್ನಿಕ್‌ನ ಪ್ರಾಧ್ಯಾಪಕ ಬಿ.ಕೆ. ದೇವಶೆಟ್ಟಿ (94489 47088) ಅಥವಾ ಸಂಶೋಧನಾ ವಿದ್ಯಾರ್ಥಿ ಆನಂದ ಎಸ್. ದೊಡ್ಡಿಹಾಳ (88673 77029) ಅವರನ್ನು ಸಂಪರ್ಕಿಸಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.