ADVERTISEMENT

ಹೊಗೇನಕಲ್: ನಾಳೆ ಗಡಿಯಲ್ಲಿ ಬಂದ್‌ಗೆ ವಾಟಾಳ್ ಕರೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ರಾಮನಗರ: ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆ ವಿರೋಧಿಸಿ ನವೆಂಬರ್ 22ರಂದು ಕರ್ನಾಟಕ- ತಮಿಳುನಾಡು ಗಡಿ ಭಾಗದ ಪ್ರದೇಶಗಳಲ್ಲಿ ಬಂದ್ ಆಚರಿಸಲಾಗುವುದು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದರು.

ತಮಿಳುನಾಡು ಸರ್ಕಾರದ ಧೋರಣೆ ವಿರೋಧಿಸಿ ರಾಮನಗರದ ಮಿನಿ ವಿಧಾನಸೌಧದ ಮುಂಭಾಗ ತಮಟೆ ಚಳವಳಿ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಹೊಗೇನಕಲ್ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಅಲ್ಲಿ ತಮಿಳುನಾಡು ಸರ್ಕಾರ ಅಕ್ರಮವಾಗಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡಿದೆ. ಈ ಸಂಬಂಧ ಮೂರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಮೌನವಹಿಸಿರುವುದು ಅನುಮಾನ ಮೂಡಿಸುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜಂಟಿ ಸಮೀಕ್ಷೆಗೆ ಒತ್ತಾಯ: ಹೊಗೇನಕಲ್ ಪ್ರದೇಶದಲ್ಲಿ ಎರಡೂ ರಾಜ್ಯಗಳ ಜಂಟಿ ಸಮೀಕ್ಷೆ ನಡೆಯಬೇಕಾದ ಅಗತ್ಯ ಇದೆ. ಈ ಕುರಿತ ಬೇಡಿಕೆಗೆ ತಮಿಳುನಾಡು ಸರ್ಕಾರ ಸಿದ್ಧವಿಲ್ಲ. ಹಾಗಾಗಿ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕೂಡಲೇ ಪ್ರಧಾನ ಮಂತ್ರಿಗಳ ಬಳಿ ಚರ್ಚಿಸಿ ಜಂಟಿ ಸಮೀಕ್ಷೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಬೇಕು ಎಂದು ವಾಟಾಳ್ ಒತ್ತಾಯಿಸಿದರು.

ಅಲ್ಲದೆ ತಮಿಳುನಾಡು ಸರ್ಕಾರ ಈಗಾಗಲೇ ಅಲ್ಲಿ ಕೈಗೊಂಡಿರುವ ಕುಡಿಯುವ ನೀರು ಯೋಜನೆ ಕಾಮಗಾರಿಯನ್ನು ಜಂಟಿ ಸಮೀಕ್ಷಾ ಕಾರ್ಯ ಮುಕ್ತಾಯ ಆಗುವ ತನಕ ಸ್ಥಗಿತಗೊಳಿಸುವಂತೆ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.