ADVERTISEMENT

‘ರಂಗಭೂಮಿ ಉಳಿವಿಗೆ ನಿಷ್ಠೆ, ಶ್ರದ್ಧೆ ಅಗತ್ಯ’

ಕುಂದಾಪುರ: ಬಯಲು ರಂಗಮಂಟಪ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 9:30 IST
Last Updated 20 ಡಿಸೆಂಬರ್ 2013, 9:30 IST

ಕುಂದಾಪುರ: ರಂಗಭೂಮಿಯನ್ನು ಉಳಿಸಿ- ಬೆಳೆಸಲು ಆಸಕ್ತಿ, ಶ್ರದ್ಧೆ ಹಾಗೂ ನಿಷ್ಠೆ ಬೇಕು. ರಂಗಭೂಮಿಯಂತಹ ಕಲೆಯನ್ನು ಉಳಿಸುವುದು ಒಂದು ಅದ್ಭುತ ಪ್ರಯತ್ನ. ಇಂತಹ ಪ್ರಯತ್ನ ಕುಂದಾಪುರದಲ್ಲಿ ರಂಗ ಅಧ್ಯಯನ ಕೇಂದ್ರ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಎಂದು ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಹೇಳಿದರು.

ನಗರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ರಂಗ ಆಧ್ಯಯನ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಎಚ್.­ಶಾಂತಾರಾಮ್ ಬಯಲು ರಂಗಮಂಟ­ಪವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. 50 ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದ ತಮ್ಮ ನೆನಪುಗಳನ್ನು ಬಿಚ್ಚಿಟ್ಟ ಬಾಳಪ್ಪನವರು, ಸುಮಾರು 50 ವರ್ಷಗಳ ಹಿಂದೆ ಕಲಾ ವೈಭವ ತಂಡ ಕಟ್ಟಿಕೊಂಡು ಬಂದಾಗ ಇಲ್ಲಿನ ಜನ ಬಹಳಷ್ಟು ರೀತಿಯ ಸಹಕಾರ ನೀಡಿದ್ದರು. ಶಿವರಾಮ ಕಾರಂತ ಅವರ ಅಣ್ಣ ಕೂಡ ಸಹಕಾರ ನೀಡಿದ್ದರು. ಜತೆಗೆ ಒಂದ್ ನಾಟಕವನ್ನೂ ನೀಡಿದ್ದರು ಎಂದು ಹೇಳಿದ ಅವರು ರಂಗಭೂಮಿಯನ್ನು ಉಳಿಸಿ-ಬೆಳೆಸುವವರ ಶ್ರಮ ಅಭಿನಂದನೀಯ ಎಂದು ಹೇಳಿದರು.

ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್ ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಮುಖ್ಯಅತಿಥಿಗಳಾಗಿದ್ದರು. ಭಂಡಾರ್‌ಕಾರ್ಸ್‌ ಕಾಲೇಜಿನ ವಿಶ್ವಸ್ಥರಾದ ಬಿ.ಎಂ ಸುಕುಮಾರ ಶೆಟ್ಟಿ, ಕೆ.ದೇವದಾಸ ಕಾಮತ್, ಕೆ.ಶಾಂತಾರಾಮ ಪ್ರಭು, ರಾಜೇಂದ್ರ ತೋಳಾರ್, ಸದಾನಂದ ಚಾತ್ರ ಉಪಸ್ಥಿತರಿದ್ದರು.

ರಂಗ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ವಸಂತ ಬನ್ನಾಡಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ.­ಎನ್.­ಪಿ ನಾರಾಯಣ ಶೆಟ್ಟಿ ಸ್ವಾಗತಿಸಿದರು, ಕೋ.­ಶಿವಾನಂದ ಕಾರಂತ ನಿರೂಪಿಸಿದರು, ಸುಳ­ಗೋಡು ನಾರಾಯಣ ರಾವ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಪಿ.ಲಂಕೇಶ ಅವರ ರಚನೆಯ ಸಂಕ್ರಾಂತಿ ನಾಟಕ ವಸಂತ ಬನ್ನಾಡಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.