ADVERTISEMENT

100 ಗ್ರಾಮಗಳಲ್ಲಿ ಸಾಂಸ್ಕೃತಿಕ ಭವನ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಮುಧೋಳ:  ಗ್ರಾಮೀಣ ಕಲೆಗಳ ಉಳಿವಿಗಾಗಿ, ಕಲಾವಿದರನ್ನು ಪ್ರೋತ್ಸಾಹಿಸಲು ರಾಜ್ಯದಾದ್ಯಂತ 100 ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ಈಗಾಗಲೇ ಹಣ ಮಂಜೂರಾಗಿದ್ದು, ಇನ್ನೂ 100 ಭವನಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕಲೆ, ಸಂಸ್ಕೃತಿ ಸಂಪ್ರದಾಯಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಕಲಾವಿದರನ್ನು ಗುರುತಿಸುವವರಿಲ್ಲದೆ, ಬಹುತೇಕ ಕಲಾವಿದರ ಕಲೆಗಳು ವ್ಯರ್ಥವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೆಲವು ಆಯ್ದ ಗ್ರಾಮಗಳಲ್ಲಿ ಸಾಂಸ್ಕೃತಿಕ ಭವನಗಳನ್ನು ನಿರ್ಮಿಸಿ ಅಲ್ಲಿನ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಮುಂಚೆ ಒಂದು ಸಾಂಸ್ಕೃತಿಕ ಭವನಕ್ಕೆ ರೂ. 2 ಲಕ್ಷ ಕೊಡಲಾಗುತ್ತಿತ್ತು, ಆದರೆ ಇದೀಗ ನಮ್ಮ ಸರ್ಕಾರದಲ್ಲಿ ರೂ. 10 ಲಕ್ಷ ನೀಡಲಾಗುತ್ತಿದೆ. ಸಾಂಸ್ಕೃತಿಕ ಭವನಗಳಿಗೆ ಸ್ಥಳೀಯ ಶ್ರೇಷ್ಠ ದಿವಂಗತ ಕಲಾವಿದರ ಹೆಸರನ್ನು ಇಡಲಾಗುತ್ತಿದೆ ಎಂದು ಹೇಳಿದರು.

ರನ್ನ ಉತ್ಸವ:  ಈ ಬಾರಿ ರನ್ನ ಉತ್ಸವವನ್ನು ಮುಧೋಳದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿಶ್ಚಯಿಸಲಾಗಿದೆ. ಜಾನಪದ ಪ್ರಶಸ್ತಿ ನೀಡುವುದು ಮತ್ತು ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ರನ್ನ ಪ್ರತಿಷ್ಠಾನಕ್ಕೆ ವಹಿಸಲಾಗುವುದು. ಏಪ್ರಿಲ್ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.