ADVERTISEMENT

100 ವೈದ್ಯಕೀಯ ಕಾಲೇಜು ಸ್ಥಾಪನೆ: ಸಚಿವ ಆಜಾದ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ಕೋಲಾರ: ವೈದ್ಯಕೀಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮುಂದಿನ ಮೂರ‌್ನಾಲ್ಕು ವರ್ಷಗಳಲ್ಲಿ 100 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಇಲ್ಲಿ ಶುಕ್ರವಾರ ತಿಳಿಸಿದರು.

ನಗರದ ಹೊರವಲಯದ ಟಮಕದಲ್ಲಿರುವ ದೇವರಾಜ ಅರಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬೆಳ್ಳಿ ಮಹೋತ್ಸವದ ಅಂಗವಾಗಿ ರಜತ ಭವನ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಸ್ತುತ 7 ಲಕ್ಷ ವೈದ್ಯರಿದ್ದಾರೆ. ಆದರೆ ಇನ್ನೂ 7 ಲಕ್ಷ ವೈದ್ಯರು ಬೇಕಾಗಿದ್ದಾರೆ.
ಅದಕ್ಕೆ ಇನ್ನಷ್ಟು ವೈದ್ಯಕೀಯ ಕಾಲೇಜುಗಳೂ ಅಗತ್ಯವಾಗಿದೆ. ಹೀಗಾಗಿ 100 ಹೆಚ್ಚುವರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.

ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಿಗದಿ ಮಾಡಿರುವ ನಿಯಮಗಳಲ್ಲಿಯೂ ಕೆಲವನ್ನು ಸಡಿಲಗೊಳಿಸಲಾಗಿದೆ. ಕಾಲೇಜು ಸ್ಥಾಪನೆಗೆ 25 ಎಕರೆ ಭೂಮಿ ಇರಬೇಕಿತ್ತು. ಆದರೆ ಅದನ್ನು 20 ಎಕರೆಗೆ ಇಳಿಸಲಾಗಿದೆ.
ಕಾಲೇಜು ಸ್ಥಾಪನೆಗೆ ಬೇಕಾಗಿದ್ದ ಬಂಡವಾಳ ವೆಚ್ಚದಲ್ಲೂ ಶೇ 30ರಷ್ಟು ಕಡಿತವಾಗಲಿದೆ. ಹೀಗಾಗಿ ಕಾಲೇಜು ಸ್ಥಾಪನೆ ಮಾಡುವ ಉದ್ದೇಶವುಳ್ಳವರು ಉತ್ಸಾಹದಿಂದ ಮುಂದೆ ಬರಬಹುದು ಎಂದರು.

ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ಈಗಿರುವಂತೆ ಪದವಿ ತರಗತಿಗೆ 150 ವಿದ್ಯಾರ್ಥಿಗಳ ಬದಲು 250 ಮಂದಿಯನ್ನು ದಾಖಲು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

ಸ್ನಾತಕೋತ್ತರ ಪದವಿ ಪ್ರವೇಶ ಸಂಖ್ಯೆ ಏರಿಸಲಾಗುವುದು. ಬೋಧಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸದ್ಯಕ್ಕೆ ಸೇವೆಯಲ್ಲಿರುವವರ ನಿವೃತ್ತಿ ವಯಸ್ಸನ್ನು 65ರಿಂದ 70ಕ್ಕೆ ಹೆಚ್ಚಿಸಲಾಗಿದೆ ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.