ADVERTISEMENT

4 ಮಕ್ಕಳಿಗೆ ವಿಷ ಉಣಿಸಿ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST

ಹುಣಸೂರು: ಸಾಲ ಬಾಧೆ ತಾಳದ ರೈತ ಮಹಿಳೆ ತನ್ನ ನಾಲ್ವರು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಉದ್ದೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ಉದ್ದೂರು ಗ್ರಾಮದ ಗೋಪಾಲ್ ಅವರ ಪತ್ನಿ ರಾಜೇಶ್ವರಿ     (38), ಪುತ್ರಿಯರಾದ ಸಂಧ್ಯಾ (12), ಶ್ವೇತಾ (10), ಅವಳಿ ಮಕ್ಕಳಾದ ಸವಿತಾ (8) ಮತ್ತು ಅಭಿನಯ (8) ಸಾವಿಗೀಡಾದವರು.  

ಬೀಜನಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಉದ್ದೂರಿನ ರಾಜೇಶ್ವರಿ ಮತ್ತು ಗೋಪಾಲ ದಂಪತಿ ತಮಗೆ ಇದ್ದ ಒಂದು ಎಕರೆ ಹೊಲದಲ್ಲಿ ತರಕಾರಿ ಮತ್ತು ಹೊಗೆಸೊಪ್ಪು ಬೆಳೆದು ಜೀವನ ಸಾಗಿಸುತ್ತಿದ್ದರು.

ರಾಜೇಶ್ವರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕೃಷಿಯಲ್ಲಿ ನಷ್ಟ ಉಂಟಾಗಿ ಸಾಲ ನೀಡಿದವರ ಒತ್ತಡ ಸಹಿಸಲಾಗದೆ ಶನಿವಾರ ಸಂಜೆ ಹೊಲದಲ್ಲಿ ರಾಜೇಶ್ವರಿ ಮಕ್ಕಳಿಗೆ ವಿಷ ಉಣಿಸಿ ತಾವೂ ಸೇವಿಸಿದ್ದಾರೆ.

ಪತ್ನಿ ಮತ್ತು ಮಕ್ಕಳು ಸಾವಿಗೀಡಾಗಿದ್ದರೂ ಗೋಪಾಲ್ ಅವರಿಗೆ ಗೊತ್ತಾಗಿಲ್ಲ. ಹೊಲದಲ್ಲಿ ಹಸಿ ಮೆಣಸಿನಕಾಯಿಗೆ ಔಷಧಿ ಸಿಂಪಡಣೆ ಮಾಡುವುದರಲ್ಲಿ ಮಗ್ನರಾಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಪತ್ನಿ ಮತ್ತು ಮಕ್ಕಳು ವಿಷ ಸೇವಿಸಿ ಸಾವನ್ನಪ್ಪಿದ್ದನ್ನು ಕಣ್ಣಾರೆ ಕಂಡು ಗೋಪಾಲ್ ಎದೆ ಬಡಿದುಕೊಂಡು ಅಳತೊಡಗಿದರು. ತನ್ನ ಮನೆಯ ನಂದಾದೀಪ ಆರಿ ಹೋಯಿತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿಯಿತು.

`ಪತ್ನಿ, ಮಕ್ಕಳು ಎಲ್ಲರೂ ನಿತ್ಯ ಹೊಲದಲ್ಲಿ ಹಸಿ ಮೆಣಸಿನಕಾಯಿಗೆ ಔಷಧಿ ಸಿಂಪಡಿಸುತ್ತಿದ್ದೆವು. ಮನೆಯವರೆಲ್ಲರೂ ವ್ಯವಸಾಯಕ್ಕೆ ಸಹಕರಿಸುತ್ತಿದ್ದರು. ಶನಿವಾರ ಮಕ್ಕಳು ಶಾಲೆ ಮುಗಿಸಿ ಹೊಲಕ್ಕೆ ಬಂದಿದ್ದರು. ಹೆಂಡತಿ ಮತ್ತು ಮಕ್ಕಳು ಹೊಲದಲ್ಲಿ ಕುಳಿತಿದ್ದರು. ನಾನು ಔಷಧಿ ಸಿಂಪಡಣೆಯಲ್ಲಿ ಮಗ್ನನಾಗಿದ್ದಾಗ ಅತ್ತ ಪತ್ನಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ~ ಎಂದು ಗೋಪಾಲ್ ಹೇಳುವಾಗ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. `ಗೋಪಾಲ್ ಹುಟ್ಟು ಕಿವುಡನಾಗಿದ್ದರೂ ಸುಖ ಜೀವನ ನಡೆಸುತ್ತಿದ್ದರು.

ರಾಜೇಶ್ವರಿ ತನ್ನ ಪಾಲಿಗೆ ಬಂದ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದರು. ತರಕಾರಿ ಬೇಸಾಯ ಮಾಡುತ್ತಿದ್ದ ಇವರು ಕೈ ಸಾಲ ಮಾಡಿದ್ದರು. ತರಕಾರಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸ್ದ್ದಿದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ~ ಎಂದು ಗ್ರಾ. ಪಂ ಸದಸ್ಯ ಪ್ರೇಮಕುಮಾರ್ ತಿಳಿಸಿದರು.

ಸ್ಮಶಾನ ಮೌನ: ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ವಾಸಿಸುತ್ತಿದ್ದ ಗೋಪಾಲ್ ಮತ್ತು ರಾಜೇಶ್ವರಿ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು  ಗೋಪಾಲ್ ಮನೆಯತ್ತ ಧಾವಿಸಿ ಬರತೊಡಗಿದರು. ಐವರು ಹೆಣವಾಗಿ ಬಿದ್ದಿದ್ದನ್ನು ಕಂಡ ಹೆಂಗಳೆಯರ ಕಣ್ಣಾಲಿಗಳು ಒದ್ದೆಯಾಗಿದ್ದವು. ಸಾಲ ಬಾಧೆಗೆ ಜೀವವನ್ನೇ ಬಲಿ ಕೊಟ್ಟರಲ್ಲ ಎಂದು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದರು. ಇಡೀ ಕುಟುಂಬವನ್ನೇ ಕಳೆದುಕೊಂಡ ಗೋಪಾಲ್ ಮನೆ ಮೂಲೆಯಲ್ಲಿ ಕೂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.