ADVERTISEMENT

ಕೊಡೇಕಲ್ಲನಿಂದ ಕಾಗಿನೆಲೆಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:10 IST
Last Updated 8 ಫೆಬ್ರುವರಿ 2018, 9:10 IST

ಹುಣಸಗಿ: ಶಿವರಾತ್ರಿ ಅಂಗವಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಫೆ.15ರಿಂದ ಮೂರು ದಿನ ಜರುಗುವ ಸಂಗಮೇಶ್ವರ ದೇವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊಡೇಕಲ್ಲ ಗ್ರಾಮದಿಂದ ಭಕ್ತರು ಮಂಗಳವಾರ ಪಾದಯಾತ್ರೆ ಆರಂಭಿಸಿದರು. ಗ್ರಾಮದಲ್ಲಿ ಬಸವಣ್ಣ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪೀಠಾಧಿಪತಿ ವೀರಯ್ಯ ಅಪ್ಪನವರು ಯಾತ್ರೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ಹಾವೇರಿ ಜಿಲ್ಲೆಯ ಕಾಗಿನೆಲೆ ಗ್ರಾಮದಲ್ಲಿ ನೆಲೆಸಿರುವ ಸಂಗಮೇಶ್ವರರು, ಕೊಡೇಕಲ್ಲ ಬಸವಣ್ಣನವರ ದ್ವಿತೀಯ ವರಪುತ್ರರು. ಕನಕದಾಸರು ತಮ್ಮ ಕೀರ್ತನೆಗಳ ಮತ್ತು ಮುಂಡಿಗೆಗಳ ಅರ್ಥ ಬಿಡಿಸಿಕೊಳ್ಳಲು ಕೊಡೇಕಲ್ಲದ ಸಂಗಮೇಶ್ವರರನ್ನು ಕಾಗಿನೆಲೆಗೆ ಕರೆಸಿಕೊಂಡಿದ್ದರು. ಮುಂಡಿಗೆಗಳ ಅರ್ಥ ಬಿಡಿಸಿಕೊಳ್ಳಲು ಯಶಸ್ವಿಯಾದರು’ ಎಂದು ಹೇಳಿದರು.

‘ಶಿವರಾತ್ರಿ ಅಮಾವಾಸ್ಯೆಯ ಮರುದಿನದಿಂದ ಮೂರು ದಿನ ವಿಜೃಂಭಣೆಯಿಂದ ಕಾಗಿನೆಲೆಯಲ್ಲಿ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಜಾತ್ರೆಯಲ್ಲಿ ಸುರಪುರ ತಾಲ್ಲೂಕಿನ ಕೊಡೇಕಲ್ಲನ ಸರ್ವಧರ್ಮದ ಐದು ಸಾವಿರಕ್ಕೂ ಹೆಚ್ಚು ಭಕ್ತರು ಕಾಗಿನೆಲೆಯಲ್ಲಿ ಸೇರುತ್ತಾರೆ. ಈ ಉತ್ಸವ ಭಾವೈಕ್ಯಕ್ಕೆ ಸಾಕ್ಷಿಯಾಗಿದೆ’ ಎಂದರು.

ADVERTISEMENT

ಕೊಡೇಕಲ್ಲ ಬಸವಪೀಠ ವೃಷಬೇಂದ್ರ ಸ್ವಾಮಿ, ರಾಜಾ ಜಿತೇಂದ್ರನಾಯಕ ಜಹಾಗಿರದಾರ, ತಿಮ್ಮಮ್ಮ ಶಂಭನಗೌಡ, ಐ.ಎನ್.ಕೊಡೇಕಲ್ಮಠ, ವಿ.ಎಸ್.ಹಾವೇರಿ, ಬಸವರಾಜ ಗೋನಾಟ್ಲ, ಬಸಪ್ಪ ಪಂಜಗಲ್ ಸೇರಿದಂತೆ  ಬಸವೇಶ್ವರ ಭಜನಾ ಮಂಡಳಿ, ಕಾಗಿನೆಲೆ ಸಂಗಮೇಶ್ವರ ಯುವ ಜನ ರಾಷ್ಟ್ರೀಯ ಭಾವೈಕ್ಯತಾ ಪುನಶ್ಚೇತನ ವೇದಿಕೆಯ ನೇತೃತ್ವದಲ್ಲಿ 101 ಮಹಿಳೆಯರು ಸೇರಿ 300ಕ್ಕೂ ಹೆಚ್ಚು ಭಕ್ತರು ಯಾತ್ರೆಯಲ್ಲಿ ಇದ್ದಾರೆ.

450 ಕಿ.ಮೀ ದೂರದ ಯಾತ್ರೆಯು 10 ದಿನ ಸಾಗಲಿದೆ. ಫೆ.15ರಂದು ರಾತ್ರಿ 8ಗಂಟೆಗೆ ಪಲ್ಲಕ್ಕಿ ಕಳಸಾ ರೋಹಣ, 16ರಂದು ಬೆಳಿಗ್ಗೆ 8 ಗಂಟೆಯಿಂದ ಕಾಗಿನೆಲೆಯ ಪ್ರಮುಖ ಬೀದಿಗಳಲ್ಲಿ ಕೊಡೇಕಲ್ಲ ಹಾಗೂ ಕಾಗಿನೆಲೆಯ ಶ್ರೀಗಳ ನೇತೃತ್ವದಲ್ಲಿ ಪಲ್ಲಕ್ಕಿ ಮಹೋತ್ಸವ ಜರಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.