ADVERTISEMENT

ರಾಷ್ಟ್ರ ಮಟ್ಟದ ಪೈಪೋಟಿಗೆ ಸಿದ್ಧರಾಗಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 6:42 IST
Last Updated 21 ಫೆಬ್ರುವರಿ 2018, 6:42 IST
ಕನಕಪುರ ತಾಲ್ಲೂಕಿನ ಐ.ಗೊಲ್ಲಳ್ಳಿ ಗ್ರಾಮದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಸಂಸದ ಡಿ.ಕೆ.ಸುರೇಶ್‌ ಉದ್ಘಾಟಿಸಿದರು
ಕನಕಪುರ ತಾಲ್ಲೂಕಿನ ಐ.ಗೊಲ್ಲಳ್ಳಿ ಗ್ರಾಮದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡವನ್ನು ಸಂಸದ ಡಿ.ಕೆ.ಸುರೇಶ್‌ ಉದ್ಘಾಟಿಸಿದರು   

ಕನಕಪುರ: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ ಕಲ್ಪಿಸಲು ಸರ್ಕಾರ ಅಗತ್ಯ ಕಾರ್ಯಕ್ರಮ ರೂಪಿಸಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾನತೆ ಮೂಡಬೇಕಾದರೆ ಪ್ರತಿಯೊಬ್ಬರಿಗೂ ಉಚಿತ ಕಡ್ಡಾಯ ಶಿಕ್ಷಣ ಸಿಗಬೇಕು. ಗ್ರಾಮೀಣ ಭಾಗದಲ್ಲಿನ ಜನರು ಮಕ್ಕಳನ್ನು ಶಾಲೆಗೆ ಕಳಿಸುವಷ್ಟು ಶಕ್ತರಾಗಿರುವುದಿಲ್ಲ. ಆ ಕಾರಣದಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಮಕ್ಕಳನ್ನು ಶಾಲೆ ಬಿಡಿಸಿ ವ್ಯವಸಾಯಕ್ಕೆ ಇಲ್ಲವೇ ದುಡಿಮೆಗೆ ಹಚ್ಚುತ್ತಾರೆ. ಮನೆಯಲ್ಲಿನ ಸಮಸ್ಯೆ ಮಕ್ಕಳ ಶಿಕ್ಷಣದ ಮೇಲೆ ಬೀರಬಾರದೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ADVERTISEMENT

ಈಗ ಶಿಕ್ಷಣ ವ್ಯವಸ್ಥೆ ಸುಧಾರಿಸಿದ್ದು, ಹಲವು ಸವಾಲಗಳು ಎದುರಾಗಿವೆ. ಗ್ರಾಮೀಣ ಪ್ರದೇಶದ ಮಕ್ಕಳು ಕೇವಲ ನಗರ ಪ್ರದೇಶದ ಮಕ್ಕಳೊಂದಿಗೆ ಪೈಪೋಟಿ ನಡೆಸದೆ ರಾಷ್ಟ್ರಮಟ್ಟದಲ್ಲಿ ಪೈಪೋಟಿ ಎದುರಿಸಬೇಕಿದೆ ಎಂದರು.

₹2 ಕೋಟಿ ವೆಚ್ಚದಲ್ಲಿ ಮಾದರಿಯಾಗಿ ವಿದ್ಯಾರ್ಥಿನಿಯರ ನಿಲಯವನ್ನು ನಿರ್ಮಾಣ ಮಾಡಲಾಗಿದೆ. 50ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶವಿದೆ. ಪ್ರಸಕ್ತ ಸಾಲಿನಿಂದ ಪ್ರವೇಶ ನೀಡಲಾಗುವುದು. ಈ ಭಾಗದ ಬಾಲಕಿಯರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಹೇಳಿದರು.

ಬಿ.ಸಿ.ಎಂ.ನ ಅಧಿಕಾರಿ ಕೆ.ಸತೀಶ್‌ ಮಾತನಾಡಿ, ಸಂಸದ ಡಿ.ಕೆ.ಸುರೇಶ್‌ ಅವರ ಪರಿಶ್ರಮ ಮತ್ತು ಕಾಳಜಿಯಿಂದ ಈ ಭಾಗದಲ್ಲಿ ಬಾಲಕಿಯರಿಗಾಗಿ ಇಂತಹ ಉತ್ತಮ ವಸತಿ ನಿಲಯ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯರತ್ನರಾಜೇಂದ್ರ, ಎಚ್‌.ಬಸಪ್ಪ, ಮುಖಂಡರಾದ ರಾಜೇಂದ್ರ, ಉಮೇಶ್‌, ಲೋಕೇಶ್‌, ಮಂಜುಳಾ, ಮುನಿಹುಚ್ಚೇಗೌಡ, ಕರಿಯಪ್ಪ, ಜಮೀರ್‌ ಅಹಮ್ಮದ್‌, ಗಿರೀಶ್‌, ಶಿವಣ್ಣ, ಸಾವಿತ್ರಮ್ಮ ಸ್ವಾಮಿಗೌಡ, ಮಹೇಶ್‌ ಇದ್ದರು.

ವಸತಿ ನಿಲಯಕ್ಕೆ ಅರ್ಜಿ

ವಸತಿ ನಿಲಯಕ್ಕೆ ಪ್ರಸಕ್ತ ಸಾಲಿಗೆ ಮೇ ತಿಂಗಳಲ್ಲಿ ಅರ್ಜಿ ಕರೆಯಲಾಗುವುದು, ಸಾಮಾನ್ಯ ವರ್ಗಕ್ಕೆ ಶೇ75, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ25 ರಷ್ಟು ಅವಕಾಶ ನೀಡಲಾಗಿದೆ.

ವಸತಿ ನಿಲಯ ಅತ್ಯಾಧುನಿಕತೆಯಿಂದ ಕೂಡಿದ್ದು ಬಿಸಿ ನೀರಿಗೆ ಸೋಲಾರ್‌ ವ್ಯವಸ್ಥೆ, ಸಮವಸ್ತ್ರ, ಲೈಬ್ರರಿ, ಕಂಪ್ಯೂಟರ್‌, ಮಂಚ ಮತ್ತು ಹಾಸಿಗೆ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.