ADVERTISEMENT

‘ಅನ್ನ ಕಸಿದವರಿಂದ ಉದ್ಯೋಗ ಮೇಳ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 10:03 IST
Last Updated 21 ಡಿಸೆಂಬರ್ 2017, 10:03 IST
ದೊಡ್ಡನಗೌಡ
ದೊಡ್ಡನಗೌಡ   

ಇಳಕಲ್‌: ‘ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಗ್ರಾನೈಟ್ ಉದ್ಯಮವನ್ನು ಬಂದ್‌ ಮಾಡಿ ಕೆಲಸಗಾರರ ಅನ್ನದ ಮಾರ್ಗ ಕಳೆದ ಶಾಸಕ ವಿಜಯಾನಂದ ಕಾಶಪ್ಪನವರ ಈಗ ಉದ್ಯೋಗ ಮೇಳದ ಮೂಲಕ 10ಸಾವಿರ ಯುವಕರಿಗೆ ಉದ್ಯೋಗ ಕೊಡಲು ಮುಂದಾಗಿ
ರುವುದು ಹಾಸ್ಯಾಸ್ಪದ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಟೀಕಿಸಿದರು.

ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ‘ಗ್ರಾನೈಟ್‌ ಉದ್ಯಮದಲ್ಲಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿಗಳು, ಗ್ಯಾರೇಜ್‌ಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಅವಲಂಬಿತ ಉದ್ಯೋಗಿಗಳಿದ್ದರು. ಶಾಸಕರಿಂದಾಗಿ ತಾಲ್ಲೂಕಿನಲ್ಲಿ ಉದ್ಯೋಗಗಳು ನಷ್ಟವಾಗಿವೆ ಹೊರತು ಸೃಷ್ಟಿಯಾಗಿಲ್ಲ. ಈ ಹಿಂದೆ ಹುನಗುಂದದಲ್ಲಿ ಅವರು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಎಷ್ಟು ಯುವಕರಿಗೆ ಉದ್ಯೋಗ ಒದಗಿಸಲಾಗಿದೆ ಎಂಬುದನ್ನು ತಿಳಿಸಬೇಕು’ ಎಂದರು.

ಚುನಾವಣೆಯ ಹೊಸ್ತಿಲಲ್ಲಿ ಯುವಕರ ಮೂಗಿಗೆ ತುಪ್ಪ ಹಚ್ಚುವುದು ಹಾಗೂ ಸುಳ್ಳು ಆಶ್ವಾಸನೆ ನೀಡುವುದು ಸರಿಯಲ್ಲ. ಇದು ಮುಗ್ಧರಿಗೆ ಮಾಡುವ ಅನ್ಯಾಯ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದಿಂದಾಗಿ ಬಿಜೆಪಿ ಗುಜರಾತಿನಲ್ಲಿ ಆರನೇ ಬಾರಿಗೆ ಅಧಿಕಾರ ಪಡೆದು ಐತಿಹಾಸಿಕ ಸಾಧನೆ ಮಾಡಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೋದಿ ಅವರ ವರ್ಚಸ್ಸು ಕಡಿಮೆಯಾಗಿದೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ಯಡಿಯೂರಪ್ಪನವರ ಪರಿವರ್ತನಾ ಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದನ್ನು ಕಂಡು ಕಾಂಗ್ರೆಸ್‌ನವರು ಕಂಗೆಟ್ಟಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಪಕ್ಷದ ಪ್ರಚಾರಕ್ಕೆ ತೆರಿಗೆದಾರರ ಹಣ ಹಾಗೂ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಅವರು ಯಾತ್ರೆಗೆ ಜನ ಸೇರುತ್ತಿಲ್ಲ’ ಎಂದರು.

‘ರೈತರ ಹಾಗೂ ನೇಕಾರರ ಸಾಲಮನ್ನಾ ಮಾಡಿ, ಫಲಾನುಭವಿಗಳ ಕೈಗೆಟುಕದಂತಹ ಷರತ್ತುಗಳನ್ನು ವಿಧಿಸಿರುವುದು ಸರಿಯಲ್ಲ. ಕೂಡಲೇ ಷರತ್ತುಗಳನ್ನು ಸಡಿಲಗೊಳಿಸಿ ಉತ್ತರ ಪ್ರದೇಶ ಸರ್ಕಾರದ ರೀತಿಯಲ್ಲಿ ಎಲ್ಲ ಸಂಘ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ಮನ್ನಾ ಮಾಡಬೇಕು ಹಾಗೂ ತೊಗರಿ, ಕಡಲೆಗೆ ಬೆಂಬಲ ಬೆಲೆ ಹೆಚ್ಚಿಸಿ, ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಗುರಂ, ಅಜ್ಜಪ್ಪ ನಾಡಗೌಡ, ಮಂಜುನಾಥ ಶೆಟ್ಟರ್‌, ಆದಪ್ಪ ಮೇರನಾಳ, ದಿಲೀಪ ದೇವಗಿರಕರ, ಅರವಿಂದ ಗೌಡರ, ಲಕ್ಷ್ಮಣ ಚಂದ್ರಗಿರಿ, ಪಂಪಣ್ಣ ಸಜ್ಜನ, ಸಂಗಪ್ಪ ಹೊಸೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.