ADVERTISEMENT

ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರೋಧ; ಹೋರಾಟ ತೀವ್ರ: ಎಸ್‌ಆರ್‌ಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 6:45 IST
Last Updated 6 ಜೂನ್ 2011, 6:45 IST
ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರೋಧ; ಹೋರಾಟ ತೀವ್ರ: ಎಸ್‌ಆರ್‌ಪಿ ಎಚ್ಚರಿಕೆ
ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರೋಧ; ಹೋರಾಟ ತೀವ್ರ: ಎಸ್‌ಆರ್‌ಪಿ ಎಚ್ಚರಿಕೆ   

ಬಾಗಲಕೋಟೆ: ವಿಜಾಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕೈಬಿಡದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಉಪ ನಾಯಕ ಎಸ್.ಆರ್. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ನೆಲ-ಜಲ-ಪರಿಸರ ರಕ್ಷಣೆಗಾಗಿ ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಬಸವನ ಬಾಗೇವಾಡಿಯಿಂದ ಶನಿವಾರ `ಜನಜಾಗೃತಿ ನಡಿಗೆ~ ಆರಂಭಿಸಿ, ಭಾನುವಾರ ಮಧ್ಯಾಹ್ನ ಮನಹಳ್ಳಿಗೆ ಆಗಮಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಸೂಸುವ ಹಾರುಬೂದಿಯಿಂದ ಪರಿಸರಕ್ಕೆ ತೀವ್ರ ಹಾನಿಯಾಗುವುದಲ್ಲದೇ ಅವಳಿ ಜಿಲ್ಲೆಯ ಕೃಷಿ ಚಟುವಟಿಕೆಗಳು ಹಾಗೂ ಜಗತ್ಪ್ರಸಿದ್ಧ ಐತಿಹಾಸಿಕ ಪ್ರವಾಸಿತಾಣಗಳಿಗೆ ಧಕ್ಕೆಯಾಗಲಿರುವುದರಿಂದ ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಬಸವಣ್ಣನ ಜನ್ಮಸ್ಥಳ ಬಸವನಬಾಗೇವಾಡಿ, ಐಕ್ಯಸ್ಥಳ ಕೂಡಲಸಂಗಮ, ಜಗತ್ಪ್ರಸಿದ್ಧ ಗುಮ್ಮಟಗಳು ಕೂಡಗಿ ಗ್ರಾಮದಿಂದ 25 ಕಿ.ಮೀ. ವ್ಯಾಪ್ತಿಯಲ್ಲಿದ್ದು, ಸ್ಥಾವರ ಸ್ಥಾಪನೆಯಿಂದ ಇವುಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಅವರು ವಿವರಿಸಿದರು.

ನೀರು ಕಬಳಿಕೆ

ರೈತರ ಹೊಲಗಳಿಗೆ ನೀರು ಹರಿಸಲು ಹಾಗೂ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ನಿರ್ಮಿಸಲಾಗಿದೆ. ಆದರೆ ಈ ಜಲಾಶಯಗಳ ಸುತ್ತಮುತ್ತ ಬೃಹತ್ ಕೈಗಾರಿಕೆ ಆರಂಭಿಸುವ ಮೂಲಕ ರೈತರ ನೀರು ಕಬಳಿಸುವ ಹುನ್ನಾರ ನಡೆದಿದೆ” ಎಂದು ಎಸ್.ಆರ್. ಪಾಟೀಲ ಆರೋಪಿಸಿದರು.

ಬೃಹತ್ ಕೈಗಾರಿಗಳನ್ನು ಸ್ಥಾಪಿಸಿ ಅವುಗಳಿಗೆ ನೀರು ನೀಡಿದರೆ ನೀರಾವರಿ ನೆಚ್ಚಿಕೊಂಡಿರುವ ಲಕ್ಷಾಂತರ ರೈತರ ಪಾಡೇನು ಎಂದು ಪ್ರಶ್ನಿಸಿದರು.

ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಅತೀ ಕಡಿಮೆ ಪರಿಹಾರ ನೀಡುವ ಮೂಲಕ ವಂಚನೆ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆ ಜಮೀನಿಗೆ 22 ಲಕ್ಷ ನೀಡಿದರೆ ಅವಳಿಜಿಲ್ಲೆಯ ಫಲವತ್ತಾದ ಜಮೀನುಗಳಿಗೆ ಅತೀ ಕಡಿಮೆ ಪರಿಹಾರ ನಿಗದಿಪಡಿಸಲಾಗುತ್ತಿದೆ. ಇದರ ಬಗ್ಗೆ ರೈತರು ಜಾಗೃತರಾಗಬೇಕು ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಬೆಂಬಲ-ವಿಶ್ವಾಸ
“ಅವಳಿಜಿಲ್ಲೆಯ ನೆಲ-ಜಲ-ಪರಿಸರ ರಕ್ಷಣೆ ಉದ್ದೇಶದಿಂದ ಪಕ್ಷಾತೀತವಾದ ಹೋರಾಟ ನಡೆಸಲಾಗುತ್ತಿದೆ. ಇದು ಜನಪರ ಹಾಗೂ ರೈತಪರ ಹೋರಾಟ ಆಗಿರುವುದರಿಂದ ಮುಂದಿನ ಹಂತದಲ್ಲಿ ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ `ಕೈ~ಜೋಡಿಸಬಹುದು” ಎಂದು ಎಸ್.ಆರ್.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಸದನದಲ್ಲಿಯೂ ಪ್ರಸ್ತಾಪಿಸಲಾಗುವುದು ಎಂದು ಹೇಳಿದ ಅವರು, ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಕೂಡ ಬದಲಾಗಲಿದೆ ಎಂದರು.

ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಎಚ್.ವೈ. ಮೇಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜಿಪಂ ಸದಸ್ಯ ಬಸವರಾಜ ಮೇಟಿ ಸೇರಿದಂತೆ ನೂರಾರು ಜನರು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಭಾನುವಾರ ಮಧ್ಯಾಹ್ನ ಮನಹಳ್ಳಿಯಲ್ಲಿ ಕೆಲಕಾಲ ತಂಗಿದ ಪಾದಯಾತ್ರಿಗಳು ರಾತ್ರಿ ನಾಯನೇಗಲಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದರು.

ಸೋಮವಾರ ಮಧ್ಯಾಹ್ನ ಕೂಡಲಸಂಗಮದಲ್ಲಿ `ಜನಜಾಗೃತಿ ಕಾಲ್ನಡಿಗೆ~ ಸಮಾರೋಪಗೊಳ್ಳಲಿದೆ ಎಂದು ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.