ADVERTISEMENT

ಕಟ್ಟಡ ಕಾರ್ಮಿಕರು, ಮನೆ ಕಟ್ಟಿಸುವವರ ಪರದಾಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:32 IST
Last Updated 1 ಡಿಸೆಂಬರ್ 2017, 6:32 IST
ಬಾದಾಮಿ ಸಮೀಪದ ಜಾಳಿಹಾಳ ಗ್ರಾಮದ ಪಟ್ಟಾ ಜಮೀನಿನಲ್ಲಿ ಜೆಸಿಬಿ ಮೂಲಕ ಲಾರಿಗೆ ಮರಳು ತುಂಬಲಾಗುತ್ತಿದೆ.
ಬಾದಾಮಿ ಸಮೀಪದ ಜಾಳಿಹಾಳ ಗ್ರಾಮದ ಪಟ್ಟಾ ಜಮೀನಿನಲ್ಲಿ ಜೆಸಿಬಿ ಮೂಲಕ ಲಾರಿಗೆ ಮರಳು ತುಂಬಲಾಗುತ್ತಿದೆ.   

ಬಾದಾಮಿ: ತಾಲ್ಲೂಕಿನಲ್ಲಿ ಜಾಲಿಹಾಳ ಮತ್ತು ಸುಳ್ಳ ಗ್ರಾಮದಲ್ಲಿ ಕಳೆದೊಂದು ವಾರದಿಂದ ಪಟ್ಟಾ ಜಮೀನಿನಲ್ಲಿನ ಮರಳು ಸಾಗಾಟ ನಡೆದಿದೆ. ಆದರೆ ಗುತ್ತಿಗೆದಾರರು ಮನಬಂದಂತೆ ಮರಳು ಬೆಲೆ ಹೆಚ್ಚಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘10 ಮೆಟ್ರಿಕ್‌ ಟನ್‌ ಮರಳಿನ ಲೋಡ್‌ಗೆ ಜಿಲ್ಲಾಡಳಿತ ₹ 4800 ಬೆಲೆ ನಿಗದಿಪಡಿಸಿದ್ದರೂ ₹ 14 ಸಾವಿರ ಪಡೆಯಲಾಗುತ್ತಿದೆ. ಟಿಪ್ಪರ್‌ ಲೋಡ್‌ಗೆ ₹ 16 ಸಾವಿರ ಹಣ ಪಡೆಯಲಾಗುತ್ತಿದೆ’ ಎಂದು ಲಾರಿ ಚಾಲಕ ದಾವಲಸಾಬ್ ಹೇಳಿದರು. ಲಾರಿ ಮಾಲೀಕರು ಇದೇ ಮರಳನ್ನು ಹೊರಗೆ ₹ 20 ಸಾವಿರಕ್ಕೆ ಮಾರಾಟ ಮಾಡುತ್ತಾರೆ. ದೊಡ್ಡ ಲಾರಿಯಲ್ಲಿನ ಲೋಡ್‌ ₹ 30 ಸಾವಿರ ಕ್ಕೆ ಮಾರಾಟವಾಗುತ್ತದೆ.

‘ಮರಳು ಸಾಗಿಸಲು ಕೊಡುವ ಪಾಸ್‌ನಲ್ಲಿ ಶಿವಾ ಟ್ರೇಡರ್ಸ್‌ ಎಂದು ಬರೆದರೂ ಅದರಲ್ಲಿ ಬಾದಾಮಿ ಹೊರತಾಗಿ ಬೇರೆ ಬೇರೆ ಊರುಗಳ ಹೆಸರು ನಮೂದು ಮಾಡುತ್ತಾರೆ. ಒಂದೇ ಪಾಸಿನಲ್ಲಿ ಮೂರು ಲಾರಿ ಮರಳು ಸಾಗಿಸಲಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ADVERTISEMENT

‘ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತದೆ ಎಂದು ತಿಳಿದಿದೆ. ಆದರೆ ಮಧ್ಯಮವರ್ಗದವರಿಗೆ ಮರಳು ಚಿನ್ನವಾಗಿದೆ. ಅದು ಕಾಳಸಂತೆಯಲ್ಲಿ ಸಿರಿವಂತರ ಪಾಲಾಗುತ್ತಿದೆ’ ಎಂಬುದು ಅವರ ಅಳಲು.

‘ಬಾದಾಮಿ ತಾಲ್ಲೂಕಿನಲ್ಲಿ ಸರಿಯಾಗಿ ಮರಳು ಸಿಗುವುದಿಲ್ಲ ಎಂದು ಮನೆ ಕಟ್ಟುವವರು ಗೋಳಾಡುತ್ತಿದ್ದಾರೆ. ಇಲ್ಲಿ ಒಂದು ಲಾರಿ ಹೊಳಿ ಉಸುಕು ಸಿಗಲಾರದಂಗ ಆಗೈತಿ. ಇಲ್ಲೇ ನಮ್ಮ ಮುಂದ ಬೇರೆ ಊರಿಗೆ ಲಾರಿ ಹಾದ ಹೊಕ್ಕಾವ ನಮಗ ಉಸುಕು ಸಿಗವಲ್ಲದು. ನಾವು ಬರೇ ಉಸಿಕಿನ ಗಾಡಿ ನೋಡುವಂಗ ಆಗೈತಿ. ಇಲ್ಲಿ ಯಾರೂ ಹೇಳುವವರು ಇಲ್ಲೇನ್ರಿ’ ಎಂದು ಸ್ಥಳೀಯರಾದ ಲಕ್ಷ್ಮಣ ಮರಡಿತೋಟ ಪ್ರಶ್ನಿಸುತ್ತಾರೆ.

ಪಟ್ಟಾ ಜಮೀನಿನಲ್ಲಿನ ಮರಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಯಾವುದೇ ಅಧಿಕಾರಿಯೂ ಇತ್ತ ಗಮನಹರಿಸುವುದಿಲ್ಲ. ಕೆಲವು ಕಡೆ ಸ್ಥಳೀಯ ಜನಪ್ರತಿನಿಧಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಪೊಲೀಸ್‌ ಸಿಬ್ಬಂದಿಯ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.