ADVERTISEMENT

‘ಕನಸುಗಳು ಇಲ್ಲದ ಬದುಕು ಬದುಕೇ ಅಲ್ಲ’

ಜಮಖಂಡಿ: ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 4:29 IST
Last Updated 27 ಮಾರ್ಚ್ 2018, 4:29 IST
ಜಮಖಂಡಿಯ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪಿಎಚ್‌.ಡಿ ಪದವಿ ಪಡೆದ ಶಿಕ್ಷಕರನ್ನು ಕುಲಪತಿ ಡಾ.ಎಚ್‌.ಎಂ. ಮಹೇಶ್ವರಯ್ಯ ಸನ್ಮಾನಿಸಿದರು‌
ಜಮಖಂಡಿಯ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪಿಎಚ್‌.ಡಿ ಪದವಿ ಪಡೆದ ಶಿಕ್ಷಕರನ್ನು ಕುಲಪತಿ ಡಾ.ಎಚ್‌.ಎಂ. ಮಹೇಶ್ವರಯ್ಯ ಸನ್ಮಾನಿಸಿದರು‌   

ಜಮಖಂಡಿ: ‘ಕನಸುಗಳು ಇಲ್ಲದ ಬದುಕು ಬದುಕೇ ಅಲ್ಲ. ಆದ್ದರಿಂದ ಬದುಕಿನಲ್ಲಿ ಕನಸುಗಳನ್ನು ಕಾಣಬೇಕು. ಕನಸುಗಳು ವಾಸ್ತವವಾಗಿರಬೇಕು. ಅವುಗಳು ನನಸಾಗುವಂತೆ ಕೆಲಸ ಮಾಡಬೇಕು. ನನಸಾಗುವ ವರೆಗೆ ತಾಳ್ಮೆಯಿಂದ ಇರಬೇಕು’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಡಾ.ಎಚ್‌.ಎಂ. ಮಹೇಶ್ವರಯ್ಯ ಹೇಳಿದರು.

ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್‌ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜು ಐತಿಹಾಸಿಕ ದರ್ಬಾರ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ವಿವೇಕ ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಗ್ಯಾರಂಟಿ ಅಥವಾ ವಾರಂಟಿ ಇರುವುದಿಲ್ಲ. ಆದರೆ, ಬದುಕಿನಲ್ಲಿ ಅವಕಾಶಗಳು ಇವೆ. ಉನ್ನತ ಸಾಧನೆ ಮಾಡುವ ಸಾಧ್ಯತೆಗಳು ಇವೆ. ಅದಕ್ಕೆ ಮನಸ್ಸು ಮಾಡಬೇಕು’ ಎಂದರು.

ADVERTISEMENT

‘ಈ ಲೋಕದ ಯಾವುದೇ ಜ್ಞಾನವನ್ನು ಅಥವಾ ಶಾಸ್ತ್ರವನ್ನು ತಪ್ಪಿಲ್ಲದೆ ತಿಳಿದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶಕ್ತಿ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಬೇಕು. ದೌರ್ಬಲ್ಯ ಗುರುತಿಸಿಕೊಳ್ಳುವುದು ಕೂಡ ಶಕ್ತಿ ಸಾಮರ್ಥ್ಯ ಬೆಳೆಸಿಕೊಳ್ಳುವ ಮೊದಲ ಹೆಜ್ಜೆ’ ಎಂದರು.

ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಅರುಣಕುಮಾರ ಶಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಶಿಕ್ಷಕರು ಭೇಟಿ ನೀಡಿ ಅಲ್ಲಿನ ವಿಶೇಷತೆಗಳ ಕುರಿತು ಅಧ್ಯಯನ ಮಾಡಿ ಅವುಗಳನ್ನು ಕಾಲೇಜಿನಲ್ಲಿ ಅನುಷ್ಠಾನ ಮಾಡಬೇಕು’ ಎಂದು ಸಲಹೆ ನೀಡಿದರು.

ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ.ಎ.ಬಿ. ಖೋತ, ಕಾಲೇಜು ನಿಯತ ಕಾಲಿಕೆ ಕಾರ್ಯದರ್ಶಿ ಕೌಶಲ್ಯ ನಾಂದ್ರೆ ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಬಿ.ಬಿ. ಶಿರಡೋಣಿ ವಿದ್ಯಾರ್ಥಿ ಒಕ್ಕೂಟದ ವರದಿ, ಪ್ರೊ.ಬಿ.ಐ. ಕರಲಟ್ಟಿ ದತ್ತಿನಿಧಿ ಶಿಷ್ಯವೇತನ, ಕೆ.ಎಂ. ಶಿರಹಟ್ಟಿ ಪಾರಿತೋಷಕ ವಿತರಣೆ ಸಾದರ ಪಡಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಶಿಷ್ಯವೇತನ ವಿತರಿಸಲಾಯಿತು. ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಿಸಲಾಯಿತು. ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್‌ ಗಳಿಸಿದ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪಿಎಚ್‌.ಡಿ ಪದವಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ರಶ್ಮಿ ಬಡಿಗೇರ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಡಾ.ಎಸ್‌.ಸಿ. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಟಿ.ಪಿ. ಗಿರಡ್ಡಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಎಸ್‌.ಪಿ. ಗದ್ಯಾಳ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಆಶಾ ಮಲಕಪ್ಪನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.