ADVERTISEMENT

ಕಬ್ಬು ದರ: ಸಭೆ ನಾಳೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 9:05 IST
Last Updated 10 ನವೆಂಬರ್ 2012, 9:05 IST

ಜಮಖಂಡಿ: ಕಬ್ಬು ದರ ನಿಗದಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಜಿಲ್ಲಾ ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತರ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ಇದೇ 10ರಂದು ಕರೆಯಲು ತೀರ್ಮಾನಿಸಲಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ಕಬ್ಬು ದರ ನಿಗದಿಗಾಗಿ ಮುಧೋಳದಲ್ಲಿ ಕರೆದಿದ್ದ ಸಭೆಗೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಗೈರು ಹಾಜರಾಗಿದ್ದರು. ಹೀಗಾಗಿ ಸಭೆ ವಿಫಲಗೊಂಡಿತ್ತು. ಅದರ  ಪರಿಣಾಮವಾಗಿ ಉದ್ಭವಿಸಬಹುದಾದ ಸಮಸ್ಯೆಗಳ ಕುರಿತು ಇಲ್ಲಿಯ ರಮಾ ನಿವಾಸದಲ್ಲಿ ಶುಕ್ರವಾರ ರೈತರ ಪ್ರತಿನಿಧಿಗಳ ಜೊತೆಗೆ ಚರ್ಚಿಸಿದ ಬಳಿಕ `ಪ್ರಜಾವಾಣಿ~ ಜೊತೆಗೆ ಮಾತನಾಡಿದರು.

ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರ ಜೊತೆಗೆ ಮಾತುಕತೆ ನಡೆಸಿ ಸರ್ಕಾರದ ನಿಲುವು ತಿಳಿದುಕೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ನಡೆಸುತ್ತಿರುವ ಧರಣಿ ಸ್ಥಳದಲ್ಲಿ ಜರುಗುವ ರೈತರ ಪ್ರತಿನಿಧಿಗಳ ಸಭೆಗೆ ಆಗಮಿಸಲಿದ್ದಾರೆ ಎಂದರು.

ಜಿಲ್ಲಾ ಸಚಿವರ ನೇತೃತ್ವದಲ್ಲಿ ನಡೆಯುವ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ, ರೈತರ ಪ್ರತಿನಿಧಿಗಳ ಸಭೆಯಲ್ಲಿ ಯಾವ ನಿರ್ಧಾರಕ್ಕೂ ಬರಲಾಗದಿದ್ದರೆ ಮುಂದಿನ ಹೆಜ್ಜೆ ಏನು ಎಂದು ಕೇಳಿದ ಪ್ರಶ್ನೆಗೆ, ರೈತರ ಸಮಸ್ಯೆ ಬಗೆಹರಿಯುವುದಾದರೆ ರಾಜೀನಾಮೆಗೆ ಸಿದ್ದ. ಆದರೆ ತಮ್ಮ ರಾಜೀನಾಮೆಯಿಂದ ಸಮಸ್ಯೆಗೆ ಪರಿಹಾರವಲ್ಲ ಎಂದು ಶಾಸಕ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ಹೇಳಿದರು.

ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಮುಖಂಡರಾದ ಟಿ.ಎ. ಬಿರಾದಾರ, ಪುಂಡಲೀಕ ಪಾಲಬಾವಿ ಮಾತನಾಡಿದರು. ಎಸಿ ಅಶೋಕ ದುಡಗುಂಟಿ, ಡಿವೈಎಸ್ಪಿ ಜಿ.ಆರ್. ಕಾಂಬಳೆ, ತಹಶೀಲ್ದಾರ ಜಿ.ಎಲ್. ಮೇತ್ರಿ ಉಪಸ್ಥಿತರಿದ್ದರು.

ಸಭೆ ಇಂದು: ಮುಧೋಳದಲ್ಲಿ ಶನಿವಾರ ಜರುಗುವ ರೈತರ ಸಭೆಗೆ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂಎಲ್‌ಸಿ ಜಿ.ಎಸ್.ನ್ಯಾಮಗೌಡ, ಸಿದ್ದು ಸವದಿ ಪಾಲ್ಗೊಳ್ಳಲಿದ್ದಾರೆ.
ಖಂಡನೆ:  ಕಬ್ಬಿನ ದರ ನಿಗದಿಗಾಗಿ ಶುಕ್ರವಾರ ಕರೆದಿದ್ದ ಸಭೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸೌಜನಕ್ಕಾದರೂ ಬರಬೇಕಾಗಿತ್ತು.

ಆದರೆ ನಿರಾಣಿ ಮತ್ತು ರನ್ನ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಉಳಿದವರ ವರ್ತನೆ ಖಂಡನೀಯ ಎಂದು ರೈತರ ಪ್ರತಿನಿಧಿ ನಾಗೇಶ ಸೋರಗಾಂವಿ ಹೇಳಿದರು. ರೈತರ ಪ್ರತಿನಿಧಿಗಳಾದ ಮುತ್ತಪ್ಪ ಕೋಮವಾರ, ವಿಠ್ಠಲ ತುಂಬರಮಟ್ಟಿ, ಕೃಷ್ಣ ಕೊಪ್ಪದ, ಬಂಡು ಘಾಟಗೆ, ದುಂಡಪ್ಪ ಯರಗಟ್ಟಿ, ವೆಂಕಣ್ಣ ಜಂಬಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT