ADVERTISEMENT

ಕಳಪೆ ಕಾಮಗಾರಿಯಿಂದ ರೈತರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 10:10 IST
Last Updated 15 ಮಾರ್ಚ್ 2012, 10:10 IST

ಬೀಳಗಿ: ತಾಲ್ಲೂಕಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯ ಪುನರ್ನಿರ್ಮಾಣ ಮತ್ತು ಪುನರ್ವಸತಿ ಉಪವಿಭಾಗದಿಂದ ಕಟ್ಟುತ್ತಿರುವ ಸಿ.ಡಿ. (ಚಿಕ್ಕ ಸೇತುವೆ)ಗಳು ಕಳಪೆ ಆಗಿರುವ ಹಿನ್ನೆಲೆಯಲ್ಲಿ ರೈತರು ತೊಂದರೆಗೆ ಒಳಗಾಗಿದ್ದಾರೆ.

ತಾಲ್ಲೂಕಿನ ಸೊನ್ನ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಸಂಪರ್ಕ ಕಲ್ಪಿಸಲು ರಸ್ತೆಯೊಂದನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಆರ್ ಆ್ಯಂಡ್ ಆರ್ ಸಂಖ್ಯೆ 11ರ ಕಚೇರಿಯಿಂದ ನಿರ್ಮಿಸಲಾಗುತ್ತಿದೆ. ಈ ರಸ್ತೆಗೆ ಅಲ್ಲಲ್ಲಿ ಬರುವ ಚಿಕ್ಕ ಪುಟ್ಟ ಹಳ್ಳಗಳಿಗೆ ನೀರು ಹರಿದು ಹೋಗಲು ಸಿ.ಡಿ. (ಚಿಕ್ಕ ಸೇತುವೆ)ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಸಿ.ಡಿ. ಕಟ್ಟುವಾಗ ಇರಬೇಕಾದ ಕಟ್ಟಡದ ನಿಯಮಾವಳಿಗಳನ್ನೆಲ್ಲ ಇಲ್ಲಿ ಗಾಳಿಗೆ ತೂರಲಾಗಿದೆ ಎನ್ನುವ ರೈತರು, ಅಲ್ಪ ಪ್ರಮಾಣದ ಸಿಮೆಂಟ್‌ನಲ್ಲಿ ಮರಳು ಮಿಶ್ರ ಮಾಡದೇ ಮಣ್ಣನ್ನು ಸೇರಿಸಿ ಕಟ್ಟಡ ಕಟ್ಟುತ್ತಿರುವುದನ್ನು ಪತ್ರಕರ್ತರನ್ನು ಕರೆದುಕೊಂಡು ಹೋಗಿ ಪ್ರತ್ಯಕ್ಷ ತೋರಿಸುತ್ತಾರೆ. “ಉಸುಕು ಹಾಕುವ ಬದಲು ಮಣ್ಣು ಸೇರಿಸಿ ಕಟ್ಟುವ  ವಿಧಾನ ಹೊಸದಾಗಿ ಏನರೇ ಶುರುವಾಗೇತೇನ್ರೀ” ಎಂದು ರೈತರು ಪ್ರಶ್ನಿಸುತ್ತಾರೆ.

ಇದು ಯಾರಿಗೆ ಸಂಬಂಧಿಸಿದ ಕಾಮಗಾರಿ, ಇದನ್ನು ಯಾರು ಗುತ್ತಿಗೆ ಪಡೆದುಕೊಂಡಿದ್ದಾರೆ, ಇದರ ಮೇಲ್ವಿಚಾರಣೆಗೆ ಯಾರು ಬರುತ್ತಾರೆ ಎಂಬ ಪ್ರಶ್ನೆಗಳಿಗೆ “ನಮಗೇನೂ ಗೊತ್ತಿಲ್ಲ” ಎಂಬುದೇ ಸಿಗುವ ಉತ್ತರ.
ಇದರ ಉಸ್ತುವಾರಿ ಎಂಜಿನಿಯರ್ ಇರುವುದು ಮುಧೋಳದಲ್ಲಿ, ಗುತ್ತಿಗೆದಾರರು ವಿಜಾಪುರದವರು.

ಗೌಂಡಿಗಳು ಹಾಗೂ ಕೂಲಿಯವರು ಇಂಡಿ ತಾಲ್ಲೂಕಿನವರು ಎಂಬುದು ಮಾತ್ರ ತಿಳಿದು ಬರುತ್ತದೆ. ಕಾಮಗಾರಿ ನಡೆಯುತ್ತಿರುವಾಗ ಸಂಬಂಧಿಸಿದ ಎಂಜಿನಿಯರರು, ಕೆಲಸ ನಿರೀಕ್ಷಕರು, ಇಲಾಖೆಯ ಇನ್ನಾರಾದರೂ ಕೆಲಸದ ಸ್ಥಳದಲ್ಲಿ ಯಾರೊಬ್ಬರೂ ಇರಲಿಲ್ಲ.

ಕ್ಯೂರಿಂಗ್ ಇಲ್ಲದೇ ಕಟ್ಟುತ್ತಿರುವಾಗಲೇ ಉದುರಿ ಹೋಗಿರುವ ಗಾರೆ, ಮಣ್ಣು ಮಿಶ್ರಿತ ಸಿಮೆಂಟ್‌ನ ಸಂಗ್ರಹಣೆ ಎಲ್ಲವುಗಳ ವಿವರಣೆ ನೀಡುವ ರೈತರು `ಅದೇನೋ ಕ್ವಾಲಿಟಿ ಕಂಟ್ರೋಲ್ ಅಂತಾರಲ್ರೀ, ಅಲ್ಲಿಗೆ ಇದನ್ನು ಪರೀಕ್ಷೆ ಮಾಡಾಕ ಕಳಸಬೇಕ ನೋಡ್ರೀ” ಎನ್ನುತ್ತಾರೆ.

ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕಾಮಗಾರಿ ಗುಣಮಟ್ಟದ್ದಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.