ADVERTISEMENT

ಕಾನೂನಿನ ತಿಳಿವಳಿಕೆ ಅಗತ್ಯ: ಅಮರಣ್ಣವರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:25 IST
Last Updated 8 ಅಕ್ಟೋಬರ್ 2011, 8:25 IST

ಬಾಗಲಕೋಟೆ: ಪ್ರತಿಯೊಬ್ಬ ನಾಗರಿಕನು ಕಾನೂನಿನ ತಿಳುವಳಿಕೆಯನ್ನು ಹೊಂದುವುದು ಅಗತ್ಯವಿದೆ ಎಂದು  ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ ಅಮರಣ್ಣವರ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾದಾಮಿ ತಾಲ್ಲೂಕ ಕಾನೂನು ಸೇವಾ ಸಮಿತಿ, ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಲೀಡ್ ಘಟಕ ಹಾಗೂ ಕಗಲಗೊಂಬ ಗ್ರಾಮ ಪಂಚಾಯಿತಿ  ಆಶ್ರಯದಲ್ಲಿ ಕಗಲಗೊಂಬ ಗ್ರಾಮದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ತಿಳಿವಳಿಕೆಯ ಕೊರತೆಯಿಂದಾಗಿ ಯಾರಾದರೂ ಒಂದು ತಪ್ಪನ್ನು ಮಾಡಿದರೆ ಅವರಿಗೆ ಕಾನೂನಿನಲ್ಲಿ ಕ್ಷಮೆ ಇರುವದಿಲ್ಲ, ಯಾಕೆಂದರೆ ಪ್ರತಿಯೊಬ್ಬರಿಗೂ ಈ ನೆಲದ ಕಾನೂನಿನ ಅರಿವು ಇರುತ್ತದೆ ಎಂದರು.

ಪ್ರಧಾನ ಹಿರಿಯ  ನ್ಯಾಯಾಧೀಶ ಬಸವರಾಜ ಚೇಗರಡ್ಡಿ ಮಾತನಾಡಿ, ಎಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಚೇರಿಗಳಿದ್ದು, ಬಡವರು, ಹಿಂದುಳಿದವರು, ಮಹಿಳೆಯರು, ಅರ್ಜಿಯನ್ನು ಸಲ್ಲಿಸಿದರೆ ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೇ, ಒಬ್ಬ ವಕೀಲರನ್ನು ನೇಮಕ ಮಾಡಿ ಉಚಿತವಾದ ಕಾನೂನಿನ ನೆರವನ್ನು ನೀಡಲಾಗುವುದು ಇದರ ಸದುಪಯೋಗವನ್ನು ಗ್ರಾಮೀಣ ಜನರು ಪಡೆಯಬೇಕು ಎಂದರು.

ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ವಿ. ಆರ್.ಶಿರೋಳ ಮಾತನಾಡಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ.ಎಂ.ದೇಸೂರ, ಡಿ.ಎಸ್.ಬೆಳ್ಳುಬ್ಬಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿ.ಎಸ್.ಹಿರೇಮಠ, ಎಸ್.ಆರ್.ಬರಹಾನಪುರ, ಬಿ.ಟಿ. ಬೆನಕಟ್ಟಿ, ನ್ಯಾಯಾಧೀಶರಾದ ಎಂ.ಎಂ.ಪಾಟೀಲ, ಆರ್.ಎಂ.ಬೆನಕಟ್ಟಿ, ಬಿ.ಎಸ್.ಸೂಳಿಕೇರಿ, ಆರ್.ಎಚ್.ಯಡಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.