ADVERTISEMENT

‘ಕುಷ್ಠರೋಗಿಗಳ ಕಷ್ಟ ಕೇಳೋರಿಲ್ಲ’

ಕನಿಷ್ಠ ಮೂಲ ಸೌಕರ್ಯಕ್ಕೆ ನಿವಾಸಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 7:26 IST
Last Updated 11 ಜೂನ್ 2018, 7:26 IST
ಬಾಗಲಕೋಟೆ ನಗರದ ಹೊರವಲಯದಲ್ಲಿರುವ ಕುಷ್ಠರೋಗಿಗಳ ಕಾಲೊನಿಯಲ್ಲಿ ನಿರ್ಮಿಸಿರುವ ಶೌಚಾಲಯದ ದುಸ್ಥಿತಿ
ಬಾಗಲಕೋಟೆ ನಗರದ ಹೊರವಲಯದಲ್ಲಿರುವ ಕುಷ್ಠರೋಗಿಗಳ ಕಾಲೊನಿಯಲ್ಲಿ ನಿರ್ಮಿಸಿರುವ ಶೌಚಾಲಯದ ದುಸ್ಥಿತಿ   

ಬಾಗಲಕೋಟೆ: ಶುದ್ಧ ಕುಡಿಯುವ ನೀರು, ಬೀದಿದೀಪಗಳು ಇಲ್ಲ. ಮಳೆ ಬಂದರೆ ಮನೆಗೆ ನುಗ್ಗುವ ನೀರು. ಬಹಿರ್ದೆಸೆಗಾಗಿ ಬಯಲನ್ನೇ ಅವಲಂಬಿಸಬೇಕಾದ ಪರಿಸ್ಥಿತಿ. ಇದು ನಗರದ ಹೊರವಲಯದಲ್ಲಿರುವ ಕುಷ್ಠರೋಗಿಗಳ ಕಾಲೊನಿ ದುಸ್ಥಿತಿ.

‘ನಗರಕ್ಕೆ ಅಂಟಿಕೊಂಡಂತೆ ಹೊರಹೊಲಯದ ಬಳಿ 1.20 ಎಕರೆ ಭೂಮಿ ನೀಡಲಾಗಿದೆ. ಸುಮಾರು 32 ಕುಟುಂಬಗಳ ನೂರಕ್ಕೂ ಅಧಿಕ ಜನ ಇಲ್ಲಿ ವಾಸಿಸುತ್ತಿದ್ದಾರೆ. ಇದುವರೆಗೂ ಇಲ್ಲಿನ ನಿವಾಸಿಗಳಿಗೆ ಮನೆಯ ಹಕ್ಕುಪತ್ರಗಳನ್ನು ನೀಡಿಲ್ಲ. ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತ ಮುಂದಾಗಿಲ್ಲ’ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಎಲ್ಲವೂ ನಮ್ಮ ಬಳಿ ಇದೆ. ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳು ಬರುತ್ತಾರೆ. ನಂತರ ನಮ್ಮನ್ನು ಮರೆತು ಬಿಡುತ್ತಾರೆ ಎಂಬುವುದು ಇಲ್ಲಿನವರ ದೂರಾಗಿದೆ.

ADVERTISEMENT

‘ಕಾಲೊನಿಯಲ್ಲಿ ಒಂದು ಬೋರ್‌ವೆಲ್‌ ಇದೆ. ಪ್ರತಿ ಮನೆಗಳಿಗೆ ನಲ್ಲಿ ಕೂಡ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಚಿಕ್ಕ ಘಟಕವನ್ನು ಮಾಡಿದ್ದಾರಾದರೂ ಅದು ಕೆಟ್ಟು ನಿಂತು ವರ್ಷಗಳೇ ಕಳೆದಿದೆ. ಆದರೆ ಇದುವರೆಗೂ ಅದರ ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ ಕುಡಿಯಲು ಯೋಗ್ಯವಾಗಿಲ್ಲದ ಬೋರ್‌ವೆಲ್‌ ನೀರನ್ನೇ ಅವಲಂಬಿಸಿದ್ದು, ಅದನ್ನು ಸೇವಿಸಿ ಈಗಾಗಲೇ ಅನೇಕರು ವಾಂತಿ–ಬೇದಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ನಿವಾಸಿ ನಾಗಪ್ಪ ಬೊಮ್ಮನ್ನವರ ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡರು.

ದೊಡ್ಡ ಮಳೆಯಾದ ಸಂದರ್ಭದಲ್ಲಿ ಕೆಲವೊಮ್ಮೆ ಕಾಲೊನಿಯ ಎಲ್ಲ ಮನೆಗಳಿಗೂ ವಿದ್ಯುತ್ ಸ್ಪರ್ಶ (ಅರ್ಥಿಂಗ್)ವಾಗುತ್ತದೆ. ಜೀವ ಕೈಯಲ್ಲಿ ಹಿಡಿದು ಬದುಕು ಸವೆಸುವ ಅನಿವಾರ್ಯತೆ ಬಂದಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಬಯಲೇ ಗತಿ: ‘ಕಾಲೊನಿಯ ನಿವಾಸಿಗಳಿಗಾಗಿ ಪಕ್ಕದಲ್ಲಿಯೇ ಸಾಮೂಹಿಕ ಶೌಚಾಲಯವನ್ನು ಕಟ್ಟಲಾಗಿದೆ. ಆದರೆ ಅದು ಕಳಪೆಯಾಗಿದ್ದು, ಎಲ್ಲವೂ ಹಾಳಾಗಿ ಹೋಗಿದ್ದು, ಬಾಗಿಲುಗಳು ಮುರಿದು ಬಿದ್ದಿವೆ. ಅಲ್ಲದೇ ಅವುಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಬಯಲನ್ನೇ ಅವಲಂಬಿಸುವಂತಾಗಿದೆ’ ಎಂದು ನಿವಾಸಿಗಳು ಹೇಳಿದರು.

ದೇವಸ್ಥಾನಕ್ಕಿಲ್ಲ ಅನುದಾನ: ‘ಕಾಲೊನಿಯಲ್ಲಿ ನಿವಾಸಿಗಳೇ ಸೇರಿಕೊಂಡು ₹ 12ಲಕ್ಷ ಹಣದಿಂದ ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ₹ 1ಲಕ್ಷ ಸಹಾಯ ಮಾಡಿದ್ದಾರೆ. ಈಗಾಗಲೇ ಅರ್ಧ ಕಾಮಗಾರಿ ಮುಗಿದಿದ್ದು, ಪೂರ್ಣಗೊಳ್ಳಲು ಹಣಕಾಸಿನ ಕೊರತೆ ಎದುರಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಾಯ ಹಸ್ತ ನೀಡಲಿ’ ಎನ್ನುತ್ತಾರೆ ನಿವಾಸಿಗಳು. ಈ ಬಗ್ಗೆ ನಗರಸಭೆ ಅಧಿಕಾರಿಯನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿ
ದರೂ ಅವರು ಕರೆ ಸ್ವೀಕರಿಸಲಿಲ್ಲ.

–ಮಹಾಂತೇಶ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.