ADVERTISEMENT

ಕೃಷ್ಣೆಗೆ ಬೇಸಿಗೆಯಲ್ಲಿ ನೀರು ಬಿಡಲಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 7:20 IST
Last Updated 8 ಅಕ್ಟೋಬರ್ 2012, 7:20 IST

ಜಮಖಂಡಿ: ಪ್ರತಿ ಬೇಸಿಗೆಯಲ್ಲಿ 4 ಟಿಎಂಸಿ ಅಡಿ ನೀರನ್ನು ಕೃಷ್ಣಾ ನದಿಗೆ ಬಿಡುವಂತೆ ಒಪ್ಪಂದ ಮಾಡಿಕೊಳ್ಳುವ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿಯೊಡನೆ ಚರ್ಚೆ ನಡೆಸುವಂತೆ ರಾಜ್ಯದ ಮುಖ್ಯಮಂತ್ರಿ ಶೆಟ್ಟರ್ ಅವರನ್ನು ಆಗ್ರಹಿಸುವುದಾಗಿ ತೇರದಾಳ ಶಾಸಕ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ ಹೇಳಿದರು.

ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರತಿ ಬೇಸಿಗೆಯಲ್ಲಿ ಬತ್ತಿ ಬರಿದಾಗಿ ನದಿಯ ಎರಡೂ ದಂಡೆಯ ಜಮೀನುಗಳ ಕಬ್ಬುಬೆಳೆ ಸೇರಿದಂತೆ ಎಲ್ಲ ವಾಣಿಜ್ಯ ಬೆಳೆಗಳು ಒಣಗಿ ಉಂಟಾಗುವ ಹಾನಿ ತಪ್ಪಿಸುವ ಪರಿಹಾರ ಕಂಡುಕೊಳ್ಳಲು ಕೃಷ್ಣಾ ತೀರ ರೈತ ಸಂಘ ತಾಲ್ಲೂಕಿನ ಆಲಗೂರ ಗ್ರಾಮದ ಚಂದ್ರಗಿರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಕರೆದ ಅಥಣಿ ಮತ್ತು ಜಮಖಂಡಿ ತಾಲ್ಲೂಕುಗಳ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಜಂಬಗಿ ಬಿಕೆ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ನಿರ್ಮಿಸಲಾಗುತ್ತಿರುವ ಸಂಪರ್ಕ ಸೇತುವೆಯನ್ನು ಸೇತುವೆ ಕಮ್ ಬ್ಯಾರೇಜ್‌ನ್ನಾಗಿ ಪರಿವರ್ತಿಸಲು ಹಾಗೂ ಹಿಡಕಲ್ ಜಲಾಶಯದಲ್ಲಿ ಜಮಖಂಡಿ ತಾಲ್ಲೂಕಿಗಾಗಿ ಒಂದು ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಘೋಷಿಸಿದರು.

ನೀರಿನ ಸದ್ಬಳಕೆ ದೃಷ್ಟಿಯಿಂದ ತಾಲ್ಲೂಕಿನ ಕೃಷ್ಣಾ ತೀರದ ಇಡಿ ಜಮೀನುಗಳಿಗೆ ಸರ್ಕಾರವೇ ಸಾಮೂಹಿಕ ಹನಿ ನೀರಾವರಿ ಜಾರಿಗೊಳಿಸಬೇಕು ಮತ್ತು ಪ್ರತಿ ಮಳೆಗಾಲದ ನಂತರ ಕೃಷ್ಣಾ ನದಿಯ ನೀರಿನ ಹರಿವು ಸ್ಥಗಿತಗೊಂಡ ಬಳಿಕ ಕರಿಮಸೂತಿ ಏತ ನೀರಾವರಿ ಮೂಲಕ ನೀರು ಎತ್ತುವುದನ್ನು ಸಹ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

ತಾಲ್ಲೂಕಿನ ಹಿಪ್ಪರಗಿ ಜಲಾಶಯದ ಎತ್ತರ ಹೆಚ್ಚಿಸಿ 12 ಟಿಎಂಸಿ ಅಡಿ ನೀರು ಸಂಗ್ರಹಿಸಿದರೆ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಭಾಗದ ಜಮೀನುಗಳು ಮುಳುಗಡೆ ಆಗಿ ಅಂತರ್ ರಾಜ್ಯ ಸಮಸ್ಯೆ ಸೃಷ್ಟಿ ಮಾಡುತ್ತದೆ. ಆ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರದ ಸಹಕಾರ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

1976 ರಲ್ಲಿ ಬಚಾವತ್ ಆಯೋಗ ನೀಡಿರುವ ತೀರ್ಪಿನನ್ವಯ ಆಲಮಟ್ಟಿ ಜಲಾಶಯದ `ಬಿ~ ಸ್ಕೀಂ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಹೋರಾಟ ರೂಪಿಸಬೇಕಾಗುತ್ತದೆ. `ಬಿ~ ಸ್ಕೀಂ ಯೋಜನೆಗಳು ಜಾರಿಯಾದಲ್ಲಿ ಕೃಷ್ಣಾ ತೀರದ ಜಮೀನುಗಳು ಮುಳುಗಡೆ ಆಗುತ್ತವೆ. ಆಗ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.

ರಾಜ್ಯ ವಿಧಾನಸಭೆಯಲ್ಲಿ ಕೃಷ್ಣಾ ನದಿ ನೀರಿನ ಬಗ್ಗೆ ಮಾತನಾಡಬೇಕೆಂದರೆ ವಿಧಾನಸಭೆ ಅಧ್ಯಕ್ಷರು ಸಮಯಾವಕಾಶ ನೀಡುವುದಿಲ್ಲ. ಆದರೆ ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸರ್ಕಾರ ಸಾಕಷ್ಟು ಸ್ಪಂದಿಸುತ್ತದೆ. ಈ ತಾರತಮ್ಯ ನಿಲ್ಲಬೇಕು. ಕೃಷ್ಣಾನದಿ ರೈತರ ಬಗ್ಗೆ ನಿರ್ಲಕ್ಷ್ಯ ಭಾವನೆ ಹೋಗಬೇಕು. ಅದಕ್ಕಾಗಿ ರೈತರು ಪಕ್ಷಾತೀತ, ಜಾತ್ಯತೀತ ಹೋರಾಟಕ್ಕೆ ಕಾವೇರಿ ಕೊಳ್ಳದ ರೈತರ ಮಾದರಿಯಲ್ಲಿ ಮುಂದಾಗಬೇಕು ಎಂದು ಗುಡುಗಿದರು.

ಕೃಷ್ಣಾ ತೀರ ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ ಮಾತನಾಡಿ, ಗಲಗಲಿ, ಚಿಕ್ಕಪಡಸಲಗಿ ಹಾಗೂ ಹಿಪ್ಪರಗಿ ಜಲಾಶಯಗಳ ಪೈಕಿ ಯಾವ ಜಲಾಶಯದ ಎತ್ತರ ಹೆಚ್ಚಿಸಬೇಕು ಎಂಬುದರ ಕುರಿತು ಅಧ್ಯಯನ ಕೈಕೊಳ್ಳಲು ತಜ್ಞರನ್ನೊಳಗೊಂಡ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಳವಾಡ ಏತ ನೀರಾವರಿ ಯೋಜನೆಯ ಮೂಲಕ ಚಿಕ್ಕಪಡಸಲಗಿ ಮತ್ತು ಗಲಗಲಿ ಜಲಾಶಯಗಳಿಗೆ ನೀರು ಹರಿಸುವ ಸಮಂಜಸದ ಬಗ್ಗೆ ತಾಂತ್ರಿಕ ಸಲಹೆ ಪಡೆಯಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ಸಂಗತಿಗಳ ಕುರಿತು ಬರುವ 15 ದಿನಗಳ ಒಳಗಾಗಿ ತೀರ್ಮಾನ ಆಗಬೇಕು. ಪ್ರತಿ ಬೇಸಿಗೆಯ ಮಾರ್ಚ್‌ನಿಂದ ಜೂನ್ ವರೆಗೆ ತಿಂಗಳಿಗೆ ತಲಾ ಒಂದು ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲು ಬರುವ ಡಿಸೆಂಬರ್ ಒಳಗಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಏರ್ಪಡಬೇಕು.

ಇದಕ್ಕಾಗಿ ಸುಮಾರು 50 ಮಂದಿ ರೈತರನ್ನೊಳಗೊಂಡ ಸಮಿತಿ ರಚಿಸಿ ಕಾಲಮಿತಿ ನಿಗದಿ ಮಾಡಿಕೊಂಡು ಬೆಂಗಳೂರು, ಮುಂಬೈಗೆ ಓಡಾಟ ಮಾಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ತು ಸದಸ್ಯ ಜಿ.ಎಸ್. ನ್ಯಾಮಗೌಡ, ಮಾಜಿ ಶಾಸಕ ಬಾಬುರಡ್ಡಿ ತುಂಗಳ, ಕಾಡು ಮಾಳಿ, ಸುಶೀಲಕುಮಾರ ಬೆಳಗಲಿ, ಪಿ.ಎನ್.ಪಾಟೀಲ, ಬಿ.ಎಸ್. ಸಿಂಧೂರ, ನಿಂಗಪ್ಪ ಕಡಪಟ್ಟಿ, ಸುರೇಶಗೌಡ ಪಾಟೀಲ, ಗಣಪತಿ ದೇಶಪಾಂಡೆ, ವಿಠ್ಠಲ ಚೌರಿ, ಮುತ್ತಣ್ಣ ಹಿಪ್ಪರಗಿ, ವರ್ಧಮಾನ ನ್ಯಾಮಗೌಡ ಮಾತನಾಡಿದರು. ಪದ್ಮಣ್ಣ ಜಕನೂರ, ಕಲ್ಲಪ್ಪ ಗಿರಡ್ಡಿ, ಪಿ.ಟಿ.ಪಾಟೀಲ, ಪರಗೌಡ ಬಿರಾದಾರಪಾಟೀಲ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.