ADVERTISEMENT

ಕ್ರಿಯಾ ಯೋಜನೆ ಅನುಮೋದನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 9:10 IST
Last Updated 22 ಸೆಪ್ಟೆಂಬರ್ 2011, 9:10 IST

ಜಮಖಂಡಿ: ಕಾಂಗ್ರೆಸ್ ಸದಸ್ಯರ ಆಕ್ಷೇಪಣೆಯ ಮಧ್ಯೆ ಬಹುಮತದ ಮೂಲಕ ತಾಲ್ಲೂಕು ಪಂಚಾಯಿತಿಗೆ ಮಂಜೂರಾಗಿರುವ ಒಂದು ಕೋಟಿ ರೂಪಾಯಿ ಅನಿರ್ಬಂಧಿತ ಅನುದಾನದಲ್ಲಿ ಕಾಮಗಾರಿ ಕೈಕೊಳ್ಳಲು ರೂಪಿಸಿದ್ದ ಕ್ರಿಯಾ ಯೋಜನೆ ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆ ಅನುಮೋದನೆ ನೀಡಿತು.

ಮಂಜೂರಾದ ಒಂದು ಕೋಟಿ ರೂಪಾಯಿ ಅನು ದಾನದ ಪೈಕಿ ರೂ 25 ಲಕ್ಷ ಅನುದಾನವನ್ನು ತಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿವೇಚನೆಯ ಬಳಕೆಗೆ ಬಿಟ್ಟು, ಉಳಿದ ರೂ 75 ಲಕ್ಷ ಅನುದಾನವನ್ನು ತಲಾ ಸದಸ್ಯರಿಗೆ ರೂ 3 ಲಕ್ಷದಂತೆ ಹಂಚಿಕೆ ಮಾಡಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಾಜವ್ವಗೋಳ ಸಭೆಗೆ ಸೂಚಿಸಿದರು.

ಕಾಂಗ್ರೆಸ್ ಸದಸ್ಯರಾದ ಪದ್ಮಣ್ಣ ಜಕನೂರ ಹಾಗೂ ಮಾಯಪ್ಪ ಮಿರ್ಜಿ ಅವರು ಸೂಚನೆಯನ್ನು ತೀವ್ರ ವಾಗಿ ಆಕ್ಷೇಪಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅನುದಾನ ಮೀಸಲಿಡದೆ ಪೂರ್ಣ ಅನುದಾನ ವನ್ನು ಎಲ್ಲ ಸದಸ್ಯರಿಗೆ ಸಮನಾಗಿ ಹಂಚಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯರ ಒತ್ತಡಕ್ಕೆ ಮನ್ನಣೆ ನೀಡದ ಬಿಜೆಪಿ ಸದಸ್ಯರು ಸೂಚನೆಯನ್ನು ಅನುಮೋದಿಸಿದರು.

ಈ ಮಧ್ಯೆ ನಿರ್ಣಯವನ್ನು ಮತಕ್ಕೆ ಹಾಕಿದಾಗ ತಾ.ಪಂ.ನಲ್ಲಿ ಬಹುಮತ ಇರುವ ಬಿಜೆಪಿ ಪರವಾಗಿ ನಿರೀಕ್ಷೆಯಂತೆ 15-8 ಮತಗಳ ಅಂತರದಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಯಿತು. ಸಭೆಯ ನಿರ್ಣಯದ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಹೋರಾಟ ರೂಪಿಸುವುದಾಗಿ ಮಾಯಪ್ಪ ಮಿರ್ಜಿ ಘೋಷಿಸಿದರು.

ಈ ಹಿಂದೆ ರೂ 45 ಸಾವಿರ ಅನುದಾನವನ್ನು ಅಧ್ಯಕ್ಷರ ವಿವೇಚನೆಗೆ ಬಳಸಲು ತೆಗೆದಿರಿಸಿದಾಗ ಒಂದು ಕವಡೆ ಕಾಸನ್ನೂ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಬಳಸಲಿಲ್ಲ ಎಂದು ಮಿರ್ಜಿ ಆರೋಪಿಸಿ ದರು. ಇದಕ್ಕೆ ಕಾಂಗ್ರೆಸ್‌ನ ಅನಂತಮತಿ ಪರಮ ಗೊಂಡ, ಶೈಲಾ ಚಿನಗುಂಡಿ, ಸಂಗಪ್ಪ ಪೂಜಾರಿ, ಶೇವಂತಾ ದೈಗೊಂಡ, ಕಸ್ತೂರೆವ್ವ ಕಡಪಟ್ಟಿ, ಜಯಶ್ರೀ ಕದಂ ಬೆಂಬಲಿಸಿದರು.

ಕ್ರಿಯಾ ಯೋಜನೆಯನ್ನು ಪುನರ್ ರೂಪಿಸಲು ಒತ್ತಾಯಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ವಯ ಜಿಲ್ಲಾಧಿಕಾರಿಗಳ ಅಥವಾ ಜಿಪಂ ಸಿಇಒ ಕಚೇರಿ ಮುಂದೆ ಹೋರಾಟ ರೂಪಿಸಲು ಕಾಂಗ್ರೆಸ್ ಸದಸ್ಯರು ತೀರ್ಮಾನಿಸಿದರು.

ತಾ.ಪಂ.ಅಧ್ಯಕ್ಷೆ ಮಹಾದೇವಿ ಹುಕ್ಕೇರಿ, ಉಪಾಧ್ಯಕ್ಷ ನಿಂಗಪ್ಪ ಹೆಗಡೆ, ತಾ.ಪಂ.ಕಾರ್ಯನಿರ್ವಾಹಕ ಅಧಿ ಕಾರಿ ರಾಜಕುಮಾರ ತೊರವಿ ಉಪಸ್ಥಿತರಿದ್ದರು.

ಸಭೆ ವಿಳಂಬ:  ಪ್ರತ್ಯೇಕ ಕೊಠಡಿಯೊಂದರಲ್ಲಿ ಬಿಜೆಪಿ ಸದಸ್ಯರು ಪ್ರತ್ಯೇಕ ಗುಪ್ತಸಭೆ ನಡೆಸಿದ್ದರಿಂದ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಸುಮಾರು 12.30 ಗಂಟೆಗೆ ಆರಂಭವಾಯಿತು. 

ಪತ್ರಕರ್ತರಿಗೆ ಆಹ್ವಾನ ಇಲ್ಲ: ಪತ್ರಕರ್ತರನ್ನು ದೂರ ವಿಟ್ಟು ವಿಶೇಷ ಸಾಮಾನ್ಯ ಸಭೆ ನಡೆಸಲು ಉದ್ದೇಶಿ ಸಲಾಗಿತ್ತು. ಹಾಗಾಗಿ ಪತ್ರಕರ್ತರಿಗೆ ಸಭೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ. ಆದರೆ ಸಭೆಯ ಮುನ್ನಾ ದಿನದಂದು ಕೆಲವು ಸದಸ್ಯರು ಆಕ್ಷೇಪಿಸಿದ್ದರಿಂದ ಕೊನೆಯ ಕ್ಷಣದಲ್ಲಿ ಪತ್ರಕರ್ತರನ್ನು ಆಹ್ವಾನಿಸ ಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.