ADVERTISEMENT

ಗುರು ಬ್ರಹ್ಮಾನಂದ ಪರಮಹಂಸ ಜಾತ್ರೆ ಇಂದು

ಪ್ರಭು ಎಂ ಲಕ್ಷೆಟ್ಟಿ ಕೆರೂರ
Published 31 ಡಿಸೆಂಬರ್ 2014, 6:39 IST
Last Updated 31 ಡಿಸೆಂಬರ್ 2014, 6:39 IST

ಕೆರೂರ: ಅಧ್ಯಾತ್ಮ, ಯೋಗ ನಿಷ್ಠೆಗಳಿಂದ ಸಮಾಜದ ಸ್ವಾಸ್ಥ್ಯ ನಿರ್ಮಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾಪುರು­ಷರಲ್ಲಿ ಸದ್ಗುರು ಬ್ರಹ್ಮಾನಂದ ಪರಮಹಂಸರು ಅಗ್ರಗಣ್ಯರು. ಶ್ರೀಗಳ ಜಾತ್ರಾ ಮಹೋತ್ಸವ ಇದೇ 31 ರಂದು ನಡೆಯಲಿದೆ.

ಬ್ರಹ್ಮಾನಂದ ಪರಮ ಹಂಸರು ಗುಜರಾತ್‌ನ ಶಿವಬಡೋಚಾ ಗ್ರಾಮದ ಗುರುರಾಮ ಪ್ರಸಾದ ಹಾಗೂ ದೇವ ಜಾನಕಿ ದಂಪತಿಯ ಪುತ್ರರು. ಬಾಲ್ಯದಲ್ಲೇ ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಂಡರು. ಲೌಕಿಕ ಬದುಕಿನ ಕಷ್ಟ, ಕಾರ್ಪಣ್ಯಗಳಿಂದ ಮುಕ್ತಿ ಬಯಸಿ ಸಂಸಾರ ತ್ಯಜಿಸಿದ ಅವರು, ದೇಶ ಸಂಚಾರ­ದೊಂದಿಗೆ ಡಾಕೋರ ಪಟ್ಟ ಣಕ್ಕೆ ಬಂದರು. ಅಲ್ಲಿ ಕೃಷ್ಣ ದರ್ಶನ ಪಡೆದು  ಗಂಗಾನದಿಯಲ್ಲಿ ಸ್ನಾನಗೈದು ಬಂದಾಗ  ಅಲ್ಲಿನ ಭಕ್ತ ಸಮೂಹಕ್ಕೆ ದೈವಿಕ ಸ್ವರೂಪ­ದಂತೆ ಗೋಚರಿಸಿದರು. 
 
ಸಂಚಾರ ಮುಂದುವರಿಸಿದ ಅವರು  ನರಗುಂದ ತಾಲ್ಲೂಕು ಭೈರನಹಟ್ಟಿ ಗ್ರಾಮಕ್ಕೆ ಬಂದು ಅಲ್ಲಿ ಭಕ್ತರಿಗೆ ಧರ್ಮ ಬೋಧನೆ ಮಾಡಿದರು.   ಮುಂದೆ ರಡ್ಡೇರ್ ನಾಗನೂರ ನಂತರ ಬದಾಮಿ ತಾಲ್ಲೂಕ ಗೋವನಕೊಪ್ಪದಲ್ಲಿ  ತಮ್ಮ ಅಧ್ಯಾತ್ಮ ಶಕ್ತಿಯಿಂದ ಭಕ್ತರನ್ನು ಆಶೀರ್ವದಿಸಿದರು. ನಂತರ ತಮ್ಮ ಇಡಿ ಬದುಕನ್ನು ಸಮಾಜ ಸೇವೆಗೆ ಮುಡು­ಪಾಗಿಟ್ಟರು.  ಇದೇ 31ರಂದು ಗೋವನ­ಕೊಪ್ಪದಲ್ಲಿ ನಡೆಯಲಿರುವ ಗುರು ಬ್ರಹ್ಮಾನಂದ ಪರಮಹಂಸರ ಜಾತ್ರೆ ನಿಮಿತ್ತ ಪ್ರತಿನಿತ್ಯ ಪ್ರವಚನ ಹಾಗೂ ವಚನ ಸಂಗೀತ ಕಾರ್ಯಕ್ರಮ ಜರುಗಲಿವೆ.

31ರ ರಂದು ಗುರು ಬ್ರಹ್ಮಾನಂದರ ಜೀವನ ಚರಿತ್ರೆ ಕುರಿತ ‘ಬ್ರಹ್ಮಾ ನಂದ’ ಗ್ರಂಥವನ್ನು ಗದುಗಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆ ಮಾಡುವರು. ಕಿಲ್ಲಾ ತೊರಗಲ್‌ನ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತ ಲಿಂಗ ಸ್ವಾಮೀಜಿ. ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಶಿವಯೋಗಿ ದೇವರು ಸಾನ್ನಿಧ್ಯ ವಹಿಸುವರು. ಸಚಿವ ಎಸ್.ಆರ್‌. ಪಾಟೀಲ, ಎಚ್‌.ಕೆ. ಪಾಟೀಲ, ಗೃಹ ಮಂಡಳಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನ ಮಠ, ಸಂಸದ ಪಿ. ಸಿ ಗದ್ದಿಗೌಡ್ರ. ಶಾಸಕ ಬಿ ಬಿ ಚಿಮ್ಮನಕಟ್ಟಿ. ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು. 

ಬೆಳಿಗ್ಗೆ 6 ಗಂಟೆಗೆ ಬೈರನಹಟ್ಟಿ ಶಾತವೀರ ಪಾಠಶಾಲೆಯ ವಟುಗಳಿಂದ ರುದ್ರಾಭಿಷೇಕ ನಂತರ 10ಕ್ಕೆ ಪಾಲಕಿ ಉತ್ಸವ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ , ಸಂಜೆ ಗೋಧೂಳಿ ಮುಹೂರ್ತಕ್ಕೆ ಬ್ರಹ್ಮಾನಂದರ ಭವ್ಯ ರಥೋತ್ಸವ ನಡೆಯಲಿದೆ.  ರಾತ್ರಿ 10. 30 ಕ್ಕೆ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.