ADVERTISEMENT

ಚರಗ ಚೆಲ್ಲಿ ಮಹಿಳೆಯರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 5:08 IST
Last Updated 6 ಅಕ್ಟೋಬರ್ 2017, 5:08 IST

ಬಾದಾಮಿ: ‘ ಶೀಗಿ ಹುಣ್ಣಿಮೆ ’ ನಿಮಿತ್ತ ರೈತರು ಮುಂಗಾರು ಬೆಳೆಗೆ ಚೆರಗ ಚೆಲ್ಲುವ ಮೂಲಕ ಭೂತಾಯಿ ಸೌಂದರ್ಯದ ಹಸಿರು ಸಿರಿಯ ಒಡಲನ್ನು ಶ್ರದ್ಧೆ ಭಕ್ತಿಯಿಂದ ಆರಾಧಿಸಿದರು. ಶೀಗಿ ಹುಣ್ಣಿಮೆ ಅಂಗವಾಗಿ ಪ್ರತಿವರ್ಷ ರೈತರು ಭೂತಾಯಿಗೆ ಪೂಜೆ ಮಾಡುವ ಸಂಭ್ರಮ.

ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟರೂ ಅಲ್ಲಲ್ಲಿ ಹೊಲದಲ್ಲಿ ಬೆಳೆದು ನಿಂತ ಬೆಳೆಗಳಿಗೆ ಪೂಜೆ ಮಾಡಬೇಕಲ್ಲ ಎಂದು ಭಾವಿಸಿದ ರೈತರು ಬರದಲ್ಲಿಯೂ ಮಹಿಳೆಯರು ಬುಟ್ಟಿಯಲ್ಲಿ ಚೆರಗದ ಬುತ್ತಿಯನ್ನು ಕಟ್ಟಿಕೊಂಡು ಟ್ರ್ಯಾಕ್ಟರ್‌, ಆಟೋ ಮತ್ತು ಚಕ್ಕಡಿ ಮೂಲಕ ಹೊಲಕ್ಕೆ ತೆರಳಿದರು.

‘ಮಳಿ ಕೈಕೊಟ್ಟು ಈ ವರ್ಸ ಬೆಳಿ ಬೇಸಿ ಬರಲಿಲ್ಲ. ಹೊಲದಾಗ ಬೆಳಿ ಬರಲಿ ಬಿಡಲಿ ವರ್ಸಕ್ಕೊಮ್ಮೆ ಭೂಮಿಗೆ ಪೂಜೆ ಮಾಡಬೇಕಲ್ಲರಿ. ಮುಂದಿನ ವರ್ಸರ ನಮ್ಮ ಕೈಹಿಡೀಲಿ’ ಎಂದು ರೈತ ಮಾಗುಂಡಪ್ಪ ಹೇಳಿದರು.

ADVERTISEMENT

ಇಡೀ ರಾತ್ರಿ ಮಹಿಳೆಯರು ನಿದ್ರೆಗೆಟ್ಟು ಕರಿದ ಹೂರಣ ಕಡಬು, ಹೋಳಿಗೆ, ಕರ್ಚಿಕಾಯಿ, ಎಣ್ಣೆಯ ಹೋಳಿಗೆ, ಪುಂಡಿಪಲ್ಲೆ, ಮೆಣಸಿನಕಾಯಿ, ಚವಳಿಕಾಯಿ, ತುಂಬುಗಾಯಿ ಬದನೆ, ವಿಧ ವಿಧ ಚಟ್ನಿ, ಮೊಸರು, ಖಡಕ್ ಸಜ್ಜೆ, ಜೋಳದ ರೊಟ್ಟಿ , ಅನ್ನ, ಕರಿದ ಸೆಂಡಿಗೆ ಹಪ್ಪಳದೊಂದಿಗೆ ಅಡುಗೆ ಸಿದ್ಧಪಡಿಸಿದ್ದರು.

ಹೊಲಕ್ಕೆ ತೆರಳಿದ ಕೃಷಿ ಮಹಿಳೆಯರು ಕಲ್ಲುಗಳನ್ನು ಹುಡುಕಾಡಿ ಬನ್ನಿ ಮರದ ಮುಂದೆ ಐದು ಕಲ್ಲುಗಳನ್ನು ಪಂಚಪಾಂಡವನ್ನು ಹಿಂದೆ ಕರ್ಣನನ್ನು ಇಟ್ಟು ಕೆಂಪು ಮಣ್ಣು ಮತ್ತು ಸುಣ್ಣವನ್ನು ಹಚ್ಚಿ ಪೂಜಿಸಿದರು.

ಹೊಲದಲ್ಲಿ ಬೆಳೆದ ಬೆಳೆಯು ಹುಲುಸಾಗಲಿ, ಅಧಿಕ ಇಳುವರಿ ಬರಲಿ ಎಂದು ಇಬ್ಬರು ಸೇರಿಕೊಂಡು ಹೊಲದಲ್ಲಿ ನೈವೇದ್ಯದ ಆಹಾರ ಪದಾರ್ಥವನ್ನು ಚೆಲ್ಲುತ್ತ ಹುಲ್ಲುಲಿಗೋ ..ಎಂದು ಹಿಂದೆ ಹಿಂದೆ ನೀರನ್ನು ಸಿಂಪಡಿಸುತ್ತ ಚಲಾಂಬ್ರಿಗೊ... ಎಂದು ಹೇಳುತ್ತ ಹೊಲದ ತುಂಬೆಲ್ಲ ಚರಗವನ್ನು ಚೆಲ್ಲಿದರು.

ನಂತರ ಕುಟುಂಬದ ಸದಸ್ಯರು, ನೆರೆಹೊರೆಯವರು ಮತ್ತು ಸ್ನೇಹಿತರು ಸೇರಿಕೊಂಡು ಮರದ ನೆರಳಿನಲ್ಲಿ ಮಾತನಾಡುತ್ತ ಗಂಟೆಕಾಲ ವಿವಿಧ ಭಕ್ಷ್ಯಭೋಜನವನ್ನು ಸವಿದರು. ಹೊಲದಲ್ಲಿ ಬೆಳೆದ ಸಜ್ಜೆ ಇಲ್ಲವೇ ಜೋಳದ ತೆನೆಗಳನ್ನು ತಂದು ಮನೆಯಲ್ಲಿ ಕಟ್ಟಿದರು. ಶೀಗಿಹುಣ್ಣಿಮೆ ಅಂಗವಾಗಿ ಮಹಿಳೆಯರು ಶೀಗವ್ವಳಿಗೆ ಆರತಿ ಬೆಳಗಿದರು. ಬರುವಾಗ ಹೊನ್ನಂಬ್ರಿಯ ಹೂವನ್ನು ಹರಿದು ತಂದರು.

ಊಟದ ನಂತರ ಮಕ್ಕಳು ಗಿಡದಲ್ಲಿದ್ದ ಕೆಂಪು ಬೋರಂಗಿ (ಕೆಮಡ್ಡಿ) ಮತ್ತು ಜೋಳದ ಬೆಳೆಯಲ್ಲಿನ ಹಸಿರು (ಸಜ್ಜಿ) ಬೋರಂಗಿಯನ್ನು ಹಿಡಿಯುತ್ತಿದ್ದರು. ಬರದಲ್ಲಿಯೂ ಭೂತಾಯಿ ಪೂಜೆಯ ಶೀಗಿ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.