ADVERTISEMENT

ಜನರ ಒತ್ತಾಯಕ್ಕೆ ಪಕ್ಷೇತರನಾಗಿ ಕಣಕ್ಕೆ: ಎಸ್‌.ಆರ್. ನವಲಿ ಹಿರೇಮಠ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 5:14 IST
Last Updated 21 ಏಪ್ರಿಲ್ 2018, 5:14 IST

ಹುನಗುಂದ: ‘ಚುನಾವಣೆಯ ಗೆಲುವನ್ನು ಪಕ್ಷ ಕೊಡುವುದಿಲ್ಲ; ಜನರ ಕೊಡುತ್ತಾರೆ. ಅವರ ಮನಸ್ಸನಲ್ಲಿ ನಾನು ಇದ್ದೇನೆ, ಜನರ ಅಭಿಪ್ರಾಯ, ಒತ್ತಾಯಕ್ಕಾಗಿ ಬಡವರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಸಮಾಜ ಸೇವಕ ಎಸ್.ಆರ್.ನವಲಿ ಹಿರೇಮಠ ಹೇಳಿದರು.

ಇಲ್ಲಿಯ ತಾಲ್ಲೂಕು ಆಡಳಿತ ಭವನದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಬಿಜೆಪಿ ಟಿಕೆಟ್ ನೀಡಲಾಗಿದೆ. ನಾನು ಜನರ ಒತ್ತಾಯಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದೇನೆ. ತಾಲ್ಲೂಕಿನ ಹದಿನೈದು ವರ್ಷಗಳ ಕಾಲ ಆಡಳಿತ ನಡೆಸಿದ ಇಬ್ಬರು ಶಾಸಕರ ಅಧಿಕಾರ ನೋಡಿದ್ದಾರೆ. ಜನರಿಗೆ ಅಭಿವೃದ್ಧಿ ಬೇಕಾಗಿದೆ’ ಎಂದು ಹೇಳಿದರು.

ಮೆರವಣಿಗೆ: ಅಪಾರ ಬೆಂಬಲಿಗರೊಂದಿಗೆ ಇಲ್ಲಿಯ ವಿ.ಮ. ಪ್ರೌಢಶಾಲಾ ಆವರಣದಿಂದ ಪಟ್ಟಣ ಮುಖ್ಯ ರಸ್ತೆಯ ಮೂಲಕ ವಿ.ಮ.ವೃತ್ತ, ಬಸ್ ನಿಲ್ದಾಣ, ಅಮರಾವತಿ ಕ್ರಾಸ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿದರು. ಹಸಿರು ಶಾಲು ಹೊತ್ತು ತಮ್ಮ ಬೆಂಬಲಿಗರ ಜೊತೆ ಹುನಗುಂದ ವಿಧಾನಸಭಾ ಚುನಾವಣಾಧಿಕಾರಿ ಎಸ್.ಬಿ. ಮುಳ್ಳಳ್ಳಿಯವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಾಟೀಲ, ಮಹಾಂತೇಶ ಅಂಗಡಿ, ವೀರೇಶ ಕೂಡ್ಲಗಿಮಠ, ವಿಜಯಕುಮಾರ ಪಾಟೀಲ ಇದ್ದರು.

ADVERTISEMENT

ಎರಡನೇ ಬಾರಿ ಕಾಶಪ್ಪನವರ ನಾಮಪತ್ರ: ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ತಮ್ಮ ಬೆಂಬಲಿಗರ ಜೊತೆ ಬಂದು ನಾಮಪತ್ರ ಸಲ್ಲಿಸಿದರು.

‘ಗುರುವಾರ ಸಲ್ಲಿಸಿದ್ದರೂ ಶುಭ ಶುಕ್ರವಾರ ಒಳ್ಳೆಯ ದಿವಸ ಎಂಬ ಕಾರಣಕ್ಕೆ ಇಂದು ಕೂಡ ಸಲ್ಲಿಸಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಉಪನಾಳ(ಎಸ್.ಬಿ) ಗ್ರಾಮದ ಶಶಿಕುಮಾರ ಹಳೆಪಡಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.