ADVERTISEMENT

ಜಮಖಂಡಿ–ಕುಡಚಿ ಹೆದ್ದಾರಿ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 5:03 IST
Last Updated 6 ನವೆಂಬರ್ 2017, 5:03 IST
ಬನಹಟ್ಟಿಯ ದುರ್ಗಾ ದೇವಿಯ ದೇವಸ್ಥಾನದ ಹತ್ತಿರದ ರಸ್ತೆಯು ದೂಳಿನಿಂದ ಕೂಡಿರುವುದು
ಬನಹಟ್ಟಿಯ ದುರ್ಗಾ ದೇವಿಯ ದೇವಸ್ಥಾನದ ಹತ್ತಿರದ ರಸ್ತೆಯು ದೂಳಿನಿಂದ ಕೂಡಿರುವುದು   

ರಬಕವಿ ಬನಹಟ್ಟಿ: ಇಲ್ಲಿನ ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ದೂಳಿನಿಂದ ಆವೃತವಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ರಸ್ತೆ ದುರಸ್ತಿಗೆ ಮುಂದಾಗುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇಲ್ಲಿನ ವೈಭವ ಟಾಕೀಸ್‌ನಿಂದ ಸತ್ಕಾರ ಕಾಂಪ್ಲೆಕ್ಸ್‌ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಹಾಕಿದ್ದ ಸಿಮೆಂಟ್‌ ಮಿಶ್ರಿತ ಕಲ್ಲುಗಳು ಕಿತ್ತುಹೋಗಿವೆ. ಇದರಿಂದ ವಾಹನ ಸವಾರರು ತೊಂದರೆ ಪಡುವಂತಾಗಿದೆ.

ಈ ರಸ್ತೆ ಸಮೀಪದಲ್ಲಿಯೇ ಅನೇಕ ಶಾಲಾ–ಕಾಲೇಜುಗಳಿದ್ದು, ಬೃಹತ್‌ ಪ್ರಮಾಣದ ವಾಹನಗಳು ಸಂಚರಿಸಿದಾಗ ದೂಳು ಕೋಣೆಯನ್ನು ಪ್ರವೇಶಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಪ್ರಭಾಕರ ಮೊಳೆದ, ಕುಮಾರ ಕದಂ, ರಾಜು ಬಾಣಕಾರ ಬೇಸರ ವ್ಯಕ್ತಪಡಿಸಿದರು.

ADVERTISEMENT

ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ಬಿಡುಗಡೆಯಾಗಿದೆ. ಸದ್ಯದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದರು. ಆದರೆ, ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ.

ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಸ್ತೆಯನ್ನು ರಪೇರಿ ಮಾಡಿ ದೂಳಿನಿಂದ ಮುಕ್ತಿ ಕೊಡಿಸುವಂತೆ ಸ್ಥಳೀಯರಾದ ಶೇಖರ ಹಕ್ಕಲದಡ್ಡಿ, ಪರಶುರಾಮ ಸಾಲ್ಗುಡೆ, ರಾಜು ಅಂಬಲಿ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.