ADVERTISEMENT

ಜಮಖಂಡಿ, ಹುನಗುಂದ ಬಂಡಾಯದ ಬಿಸಿ

ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅತೃಪ್ತಿ ಸ್ಫೋಟ: ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಂತಿಮ

ವೆಂಕಟೇಶ್ ಜಿ.ಎಚ್
Published 18 ಏಪ್ರಿಲ್ 2018, 5:29 IST
Last Updated 18 ಏಪ್ರಿಲ್ 2018, 5:29 IST

ಬಾಗಲಕೋಟೆ: ಬಾದಾಮಿ ಹೊರತಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಜಮಖಂಡಿ ಹಾಗೂ ಹುನಗುಂದದಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ.

ಜಮಖಂಡಿಯಿಂದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಉದ್ಯಮಿ ಸಂಗಮೇಶ ನಿರಾಣಿ ಮುನಿಸಿಕೊಂಡಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಅವರು, ಮಂಗಳವಾರ ತಾಲ್ಲೂಕು ಕೇಂದ್ರದಲ್ಲಿ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಎಂ.ಆರ್‌.ಎನ್‌ ನಿರಾಣಿ ಫೌಂಡೇಶನ್ ಮೂಲಕ ಕಳೆದೊಂದು ವರ್ಷದಿಂದಲೂ ತಾಲ್ಲೂಕಿನಲ್ಲಿ ಸಂಘಟನೆ ಆರಂಭಿಸಿದ್ದ ಸಂಗಮೇಶ, ಪಕ್ಷದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಆರಂಭದಲ್ಲಿ ಪಕ್ಷ ಸಂಘಟಿಸಿ ಹಿಂದೊಮ್ಮೆ ಶಾಸಕರೂ ಆಗಿರುವ ಶ್ರೀಕಾಂತ ಕುಲಕರ್ಣಿಗೆ ಟಿಕೆಟ್ ಒಲಿದಿದೆ. ಆರ್‌ಎಸ್‌ಎಸ್‌ನೊಂದಿಗಿನ ನಂಟು, ಹಿರಿತನ ಅವರಿಗೆ ಟಿಕೆಟ್‌ ಪಕ್ಕಾ ಮಾಡಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲೂ ಬೇಗುದಿ: ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೇಗುದಿ ಬಂಡಾಯಕ್ಕೆ ದಾರಿ ಮಾಡಿದೆ. ಶಾಸಕ ಸಿದ್ದುನ್ಯಾಮಗೌಡ ವಿರುದ್ಧ ಬಂಡಾಯದ ಬಾವು ಆರಿಸಿರುವ ಶ್ರೀಶೈಲ ದಳವಾಯಿ, ರಾಜು ಮೇಲಿನಕೇರಿ  ಸೇರಿ ಒಮ್ಮತದ ಅಭ್ಯರ್ಥಿಯಾಗಿ ಸುಶೀಲ್ ಕುಮಾರ ಬೆಳಗಲಿ ಅವರನ್ನು ನಿಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ADVERTISEMENT

ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವರಿಷ್ಠರಿಗೆ ಕಳೆದ ಬಾರಿಯ ಗೊಂದಲ ಮರುಕಳಿಸಿದೆ. ಕಾಂಗ್ರೆಸ್‌ನಲ್ಲಿ
‘ಬಿ’ಫಾರಂ ಸಿಗುವವರೆಗೂ ಅಂತಿಮ ಅಭ್ಯರ್ಥಿಯ ಖಾತರಿ ಇಲ್ಲ ಎನ್ನಲಾಗುತ್ತಿದೆ. ಹಾಗಾಗಿ ಎರಡೂ ಪಕ್ಷಗಳ ಟಿಕೆಟ್ ಜಗಳ ಈಗ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ.

ರಾಜಕೀಯ ಭವಿಷ್ಯದ ಪ್ರಶ್ನೆ: ಡಾ.ದೇವರಾಜ ಪಾಟೀಲಗೆ ಪಕ್ಷದ ಟಿಕೆಟ್ ನೀಡಿರುವುದರಿಂದ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಉಳಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ರಾಜಕೀಯ ಭವಿಷ್ಯದ ಪ್ರಶ್ನೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

‘ದೇವರಾಜ ಪಾಟೀಲಗೆ ಇನ್ನೂ 45ರ ಆಸುಪಾಸು. ಒಮ್ಮೆ ಶಾಸಕರಾದರೆ ತಿರುಗಿ ನೋಡುವ ಅಗತ್ಯ ಬೀಳುವುದಿಲ್ಲ. ಹಾಗಾದರೆ ಪುತ್ರ ಭೀಮಸೇನನ ರಾಜಕೀಯ ಭವಿಷ್ಯವೇನು?’ ಎಂದು ಚಿಮ್ಮನಕಟ್ಟಿ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧಿಸಿ ಗೆದ್ದರೆ, ಕ್ಷೇತ್ರ ಬಿಟ್ಟುಕೊಟ್ಟ ಕಾರಣಕ್ಕೆ ಮಗನಿಗೆ ವಿಧಾನಪರಿಷತ್ ಸದಸ್ಯತ್ವ ನೀಡುವಂತೆ ಬೇಡಿಕೆ ಸಲ್ಲಿಸಬಹುದು. ಹಾಗಾಗಿ ದೇವರಾಜ ಪಾಟೀಲ ಬೇಡ. ಬೇಕಿದ್ದರೆ ಸಿಎಂ ಬಂದು ಸ್ಪರ್ಧಿಸಲಿ. ನಾನೇ ಓಡಾಡಿ ಗೆಲ್ಲಿಸುತ್ತೇನೆ ಎಂದು ಚಿಮ್ಮನಕಟ್ಟಿ ರಚ್ಚೆ ಹಿಡಿದು ಕುಳಿತಿದ್ದಾರೆ. ಮೈಸೂರಿಗೂ ತೆರಳಿ ಸಿಎಂ ಭೇಟಿ ಮಾಡಿ ಬಾದಾಮಿಗೆ ಬರುವಂತೆ ಅಲವತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿಮ್ಮನಕಟ್ಟಿಗೆ ಈ ಬಾರಿ ಅವಕಾಶ ಕೊಟ್ಟರೂ ಮುಂದಿನ ಚುನಾವಣೆಗಾದರೂ ನಾವು ಪಕ್ಷದ ಟಿಕೆಟ್‌ಗೆ ಪ್ರಯತ್ನಿಸಬಹುದು. ಆದರೆ ಡಾ.ದೇವರಾಜ ಪಾಟೀಲರಿಗೆ ‘ಬಿ’ಫಾರಂ ಸಿಕ್ಕರೆ ಶಾಸಕರಾಗುವ ಆಸೆ ಕೈ ಬಿಡಬೇಕಾಗುತ್ತದೆ. ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ಹಾಗಾಗಿ ಚಿಮ್ಮನಕಟ್ಟಿ ಎತ್ತಿರುವ ಅಪಸ್ವರಕ್ಕೆ ದನಿಗೂಡಿಸುವುದು ಸೂಕ್ತ ಎಂಬುದು ಉಳಿದ ಟಿಕೆಟ್ ಆಕಾಂಕ್ಷಿಗಳ ಆಲೋಚನೆ ಎಂದು ಹೇಳಲಾಗುತ್ತಿದೆ.

ಇನ್ನು ಬಿಜೆಪಿಯಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಅಳಿಯ ಮಹಾಂತೇಶ ಮಮದಾಪುರ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಪ್ರತೀ ಬಾರಿ ಮಾವ–ಅಳಿಯನ ಜಗಳದಲ್ಲಿ ಪಕ್ಷಕ್ಕೆ ಹಾನಿಯಾಗುತ್ತಿದೆ. ಹಾಗಾಗಿ ಮಾಜಿ ಶಾಸಕ ರಾಜಶೇಖರ ಶೀಲವಂತರಗೆ ಟಿಕೆಟ್‌ ನೀಡಿ ಗುಳೇದಗುಡ್ಡಕ್ಕೆ ಪ್ರಾತಿನಿಧ್ಯ ನೀಡುವಂತೆ ಪಕ್ಷದ ತಾಲ್ಲೂಕು ಘಟಕದ ಒಂದು ಬಣ ಪಟ್ಟು ಹಿಡಿದಿದೆ ಎನ್ನಲಾಗಿದೆ. ಮೂವರ ನಡುವೆ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಹೈಕಮಾಂಡ್ ಮುಂದಾಗಿದೆ. ಜೊತೆಗೆ ಬಾದಾಮಿಯಲ್ಲಿ ಕಾಂಗ್ರೆಸ್‌ನ ‘ಬಿ’ಫಾರಂ ಅಂತಿಮವಾಗಿ ಯಾರ ಕೈಗೆ ಸಿಗಲಿದೆ ಎಂಬುದನ್ನೂ ಕಾದು ನೋಡಲಾಗುತ್ತಿದೆ. ಹಾಗಾಗಿ ಅಭ್ಯರ್ಥಿ ಆಯ್ಕೆ ತಡವಾಗಿದೆ ಎಂದು ತಿಳಿದುಬಂದಿದೆ.

ಯಾವುದೇ ಷರತ್ತು ಇಲ್ಲದೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಉದ್ಯಮಿ ಎಸ್.ಆರ್.ನವಲಿ ಹಿರೇಮಠ, ಇದೀಗ ಬೆಂಬಲಿಗರ ಒತ್ತಾಯಕ್ಕೆ ಮಣಿದು ಹುನಗುಂದದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆ ನಿಟ್ಟಿನಲ್ಲಿ ಮಂಗಳವಾರ ಕೂಡಲಸಂಗಮದಲ್ಲಿ ಬೆಂಬಲಿಗರ ಸಭೆ ಕೂಡ ಮಾಡಿದ್ದಾರೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲಗೆ ಟಿಕೆಟ್‌ ನೀಡಿರುವುದನ್ನು ವಿರೋಧಿ ಸಿರುವ ಪಕ್ಷದ ಸ್ಥಳೀಯ ಮುಖಂಡರು ನವಲಿಹಿರೇಮಠ ಬೆಂಬಲಕ್ಕೆನಿಂತಿದ್ದಾರೆ. ಇದು ಕ್ಷೇತ್ರದಲ್ಲಿ ಪಕ್ಷಕ್ಕೆ ದೊಡ್ಡ ನಷ್ಟ ಎಂದೇ ಅರ್ಥೈಸಲಾಗುತ್ತಿದೆ.

ನೈತಿಕತೆ, ಮಾತು ನೆನಪಿಸುವ ಪ್ರಯತ್ನ..

ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಪಿ.ಎಚ್.ಪೂಜಾರ ಮೌನಕ್ಕೆ ಜಾರಿದ್ದಾರೆ. ಅವರ ನಡೆ ಇನ್ನೂ ನಿಗೂಢವಾಗಿದೆ. ಮಾಧ್ಯಮ ಪ್ರತಿನಿಧಿಗಳ ಕರೆ ಕೂಡ ಸ್ವೀಕರಿಸುತ್ತಿಲ್ಲ. ‘ಪೂಜಾರ ಸಾಹೇಬರಿಗೆ ಅನ್ಯಾಯವಾಗಿದೆ. ಶಾಸಕ ಮೇಟಿ ಅವರು ಹಿಂದಿನ ಚುನಾವಣೆ ವೇಳೆ ಕೊಟ್ಟಿದ್ದ ಮಾತನ್ನು ಮತ್ತೊಮ್ಮೆ ನೆನಪಿಸಲಿದ್ದೇವೆ. ಇದು ನೈತಿಕ ಪ್ರಶ್ನೆ ಎಂಬುದನ್ನೂ ಅವರಿಗೆ ಮನವರಿಕೆ ಮಾಡಲಿದ್ದೇವೆ. ಅದಕ್ಕೂ ಮಣಿಯದಿದ್ದರೆ ಸಾಹೇಬರು (ಪೂಜಾರ) ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಲಿದ್ದೇವೆ’ ಎಂದು ಬೆಂಬಲಿಗರೊಬ್ಬರು ಹೇಳುತ್ತಾರೆ.

ಬಾಗಲಕೋಟೆಯಿಂದ ಬಿಜೆಪಿ ಟಿಕೆಟ್ ಪಡೆದಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ, ಬೀಳಗಿಯಲ್ಲಿ ಮುರುಗೇಶ ನಿರಾಣಿ, ತೇರದಾಳದಲ್ಲಿ ಸಿದ್ದು ಸವದಿ, ಮುಧೋಳದ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಬಂಡಿವಡ್ಡರ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

**

ಟಿಕೆಟ್‌ ತಂದಿರುವ ಶಾಸಕ ಎಚ್.ವೈ.ಮೇಟಿ, ನನ್ನ ಭೇಟಿಯಾಗಿ ಬೆಂಬಲ ಕೋರಿದರು. ನಿರ್ಧಾರ ತಿಳಿಸಲು ಎರಡು ದಿನ ಕಾಲಾವಕಾಶ ಕೇಳಿದ್ದೇನೆ  - ಪ್ರಕಾಶ ತಪಶೆಟ್ಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.