ADVERTISEMENT

‘ಜಮೀನಿಗೆ ನ್ಯಾಯಬದ್ಧ ದರ ನೀಡಿ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 5:43 IST
Last Updated 22 ಡಿಸೆಂಬರ್ 2017, 5:43 IST

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಸ್ವಾಧೀನಗೊಳ್ಳುವ ಜಮೀನಿಗೆ ಏಕರೂಪದ ದರ ನಿಗದಿ ಕುರಿತು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಸಂತ್ರಸ್ತರಿಂದ ಅಹವಾಲು ಹಾಗೂ ಜನಪ್ರತಿನಿಧಿಗಳಿಂದ ಸಲಹೆ ಸ್ವೀಕರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ, ‘ಒಣ ಬೇಸಾಯ ಜಮೀನು ₹ 20 ರಿಂದ 25 ಲಕ್ಷ, ನೀರಾವರಿ ಜಮೀನುಗಳಿಗೆ ₹ 40 ಲಕ್ಷ ಕ್ಕಿಂತ ಕಡಿಮೆ ಸಿಗಲ್ಲ. ಕಡಿಮೆ ಬೆಲೆ ನಿಗದಿ ಮಾಡುವುದರಿಂದ ರೈತರ ಪರಿಸ್ಥಿತಿ ಅಧೋಗತಿಗೆ ಹೋಗಲಿದೆ. ಹಾಗಾಗಿ ಸರಿಯಾಗಿ ಸಮೀಕ್ಷೆ ನಡೆಸಿ, ಮಾರುಕಟ್ಟೆ ಬೆಲೆ ನೀಡುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರು ಅದಕ್ಕೆ ಸ್ಪಂದಿಸಲಿದ್ದಾರೆ’ ಎಂದರು.

‘ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಲು ತಾಲ್ಲೂಕುವಾರು ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಜನರು ತಮ್ಮ ಸಲಹೆ, ಅಭಿಪ್ರಾಯಗಳನ್ನು ತಿಳಿಸಬೇಕು. ರೈತರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಡಿಮೆ ಬೆಲೆ ನಮೂದಿಸಿದ್ದು, ಬಹುತೇಕ ಸಮಸ್ಯೆಗೆ ಕಾರಣವಾಗಿದೆ. ತಾರತಮ್ಯವಾಗದಂತೆ ಸೂಕ್ತ ಪರಿಹಾರ ದೊರಕಿಸಿಕೊಡಲು ಸಿಎಂ ಹಾಗೂ ಕಂದಾಯ ಸಚಿವರೊಂದಿಗೆ ಚರ್ಚಿಸಲಾಗಿದೆ’ ಎಂದರು.

ADVERTISEMENT

‘ಮುಳುಗಡೆ ಸಂತ್ರಸ್ತರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಳುಗಡೆ ಸಂತ್ರಸ್ತ ಪ್ರಕಾಶ ಅಂತರಗೊಂಡ ಮಾತನಾಡಿ, ‘ಸರ್ಕಾರ ಪಾರದರ್ಶಕವಾಗಿ ಮಾರ್ಗಸೂಚಿ ಬೆಲೆಗಳನ್ನು ನಿಗದಿ ಮಾಡುತ್ತಿಲ್ಲ. ಭೂಮಾಲೀಕರ ಸಭೆ ಕರೆಯದೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

‘ಸರ್ಕಾರ ಮುಳುಗಡೆ ಸಂತ್ರಸ್ತರ ಸಾಲಮನ್ನಾ ಮಾಡಬೇಕು. ಇಲ್ಲವೇ ಹೊಸದಾಗಿ ಭೂಮಿ ಖರೀದಿಸುವ ಸಂದರ್ಭದಲ್ಲಿ ಬೋಜಾ ತುಂಬುವ ಕಾರ್ಯ ಮಾಡಬೇಕು. ಇಲ್ಲದಿದ್ದಲ್ಲಿ ಮುಳುಗಡೆಯಿಂದ ಬಂದ ಹಣದಲ್ಲಿ ಶೇ 25 ರಷ್ಟು ಸಾಲಕ್ಕಾಗಿ ಹೋಗುತ್ತದೆ. ಇನ್ನೂ ಭೂಮಿ ಖರೀದಿಸುವುದು ಕಷ್ಟವಾಗುತ್ತದೆ’ ಎಂದರು.

‘ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಕಾಲುವೆ, ಪುನರ್ವಸತಿ ಕೇಂದ್ರ ಹಾಗೂ ಹಿನ್ನೀರಿನಲ್ಲಿ ಮುಳುಗಡೆಯಾಗುವ ಎಲ್ಲ ಜಮೀನುಗಳಿಗೆ ಸರ್ಕಾರ ಏಕರೂಪ ಬೆಲೆ ನಿಗದಿಪಡಿಸಿ ಪರಿಹಾರ ಒದಗಿಸಿಕೊಡುವಂತೆ’ ಮನವಿ ಮಾಡಿದರು.

ಯೋಜನೆಗಾಗಿ ಭೂಮಿ ನೀಡುವ ಸಂತ್ರಸ್ತರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶೇ 25 ರಷ್ಟು ಹೆಚ್ಚುವರಿ ಪ್ರವೇಶಾತಿ ಕಲ್ಪಿಸಬೇಕು. ಶಿಕ್ಷಣ ಶುಲ್ಕ, ಊಟ–ವಸತಿ ಶುಲ್ಕಗಳ ಜವಾಬ್ದಾರಿಯನ್ನು ಸರ್ಕಾರವೇ ಭರಿಸಬೇಕು ಎಂದು ಹೇಳಿದರು.

ಅಹವಾಲು ಸಲ್ಲಿಸಿ ಮಾತನಾಡಿದ ಸಾಬಣ್ಣ ಬೆಣ್ಣೂರ, ಯಂಕಪ್ಪ ಬಿಲಕೇರಿ, ‘ಸರ್ಕಾರ ಸಂತ್ರಸ್ತರಿಗೆ ಮುಂದಿನ ಬಜೆಟ್ ಮಂಡನೆಯ ಒಳಗಾಗಿ ನ್ಯಾಯ ಕೊಡಿಸಬೇಕು. ಅನ್ಯಾಯವಾಗದಂತೆ ಇಂದಿನ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿಗೆ ನೀಡಬೇಕು’ ಎಂದರು.

ಹಿರೇಗುಳಬಾಳದ ಯಲಗೂರೇಶ್ ಮಾತನಾಡಿ, ‘ಯೋಜನೆಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡುವ ರೈತರ ಬಾಳಿನಲ್ಲಿ ಸರ್ಕಾರ ಆಟವಾಡದೇ ಸಂತ್ರಸ್ತರ ಮಕ್ಕಳಿಗೆ ಸರ್ಕಾರಿ ನೇಮಕಾತಿ ಸಂದರ್ಭದಲ್ಲಿ ಕೇವಲ ಸಿ ಮತ್ತು ಡಿ ಹುದ್ದೆಗಳಿಗೆ ಮಾತ್ರ ಮೀಸಲಾತಿ ಕಲ್ಪಿಸದೇ ಎ ಮತ್ತು ಬಿ ದರ್ಜೆಯ ಹುದ್ದೆಗೂ ಅವಕಾಶ ಕಲ್ಪಿಸಬೇಕು’ ಎಂದರು.

ಕಲಾದಗಿಯ ಹನಮಂತಗೌಡ ಬಿರಾದಾರ ಪಾಟೀಲ, ಬಾಗಲಕೋಟೆಯ ರಾಜೇಂದ್ರ ಬಳೂಲಮಠ, ರವಿ ಕುಮಟಗಿ, ಸೀಮಿಕೇರಿಯ ಸಂಗಪ್ಪ ಕೊಪ್ಪದ, ಅನಗವಾಡಿಯ ಶಿವನಪ್ಪ ಬಣಕಾರ ಸೇರಿದಂತೆ ನೂರಾರು ರೈತರು ತಮ್ಮ ಸಲಹೆ–ಸೂಚನೆ ನೀಡಿ, ಅಹವಾಲು ಸಲ್ಲಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಟಿಡಿಎ ಅಧ್ಯಕ್ಷ ಎ.ಡಿ.ಮೊಕಾಶಿ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಸದಸ್ಯ ಯಲ್ಲಪ್ಪ ಬೆಂಡಿಗೇರಿ, ಆಯುಕ್ತ ಗಣಪತಿ ಪಾಟೀಲ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಸೇರಿದಂತೆ ಅಧಿಕಾರಿಗಳು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.