ಬಾಗಲಕೋಟೆ: ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ಸರ್ಕಾರ ದಲಿತರಿಗೆ ಮಂಜೂರು ಮಾಡಿರುವ ಜಮೀನನ್ನು ಅತಿಕ್ರಮಿಸಿಕೊಂಡಿರುವವರನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮದ ದಲಿತ ಕುಟುಂಬದ ಸದಸ್ಯರು ನವನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಧರಣಿ ನಡೆಸಿದರು.
ಕುಳಲಿ ಗ್ರಾಮದ ದಲಿತ ಮಲ್ಲಿಕಾರ್ಜುನ ಬಟಗಿ, ಅವರ ಪತ್ನಿ ಶಾಂತಮ್ಮ, ಮಕ್ಕಳಾದ ಶ್ವೇತಾ, ವಿಶ್ವನಾಥ, ಕಾವೇರಿ ಮತ್ತು ಚೆನ್ನಮ್ಮ ಉಪವಾಸ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಧರಣಿ ನಿರತ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಮೂಲತಃ ವಿಜಾಪುರ ಜಿಲ್ಲೆಯ ಸಾರವಾಡ ಗ್ರಾಮದವರಾದ ನಮಗೆ ಅಲ್ಲಿ 2007ರಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ ಕಾರಣ ಸರ್ಕಾರ ಪರಿಹಾರವಾಗಿ ಕುಳಲಿ ಗ್ರಾಮದ ಸರ್ವೇ ನಂ. 23/2ರಲ್ಲಿ 4.4 ಎಕರೆ ಜಮೀನನ್ನು ಪರಿಹಾರವಾಗಿ ನೀಡಿದೆ ಎಂದರು.
ಸರ್ಕಾರ ಮಂಜೂರು ಮಾಡಿರುವ ಜಮೀನಿನಲ್ಲಿ ಸುಮಾರು 1 ಎಕರೆಗಿಂತ ಅಧಿಕ ಜಮೀನನ್ನು ಗ್ರಾಮದ ಪ್ರಭಾವಿ ರಾಜಕಾರಣಿಯೊಬ್ಬರು ಅತಿಕ್ರಮಿಸಿಕೊಂಡಿದ್ದು, ತೆರವುಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಅತಿಕ್ರಮಣ ತೆರವುಗೊಳಿಸಿಕೊಡುವಂತೆ ಮುಧೋಳ ತಹಶೀಲ್ದಾರ್ ಮತ್ತು ಶಾಸಕ ಗೋವಿಂದ ಕಾರಜೋಳ ಅವರಿಗೆ ಹಲವಾರು ಭಾರಿ ಮನವಿ ಮಾಡಿದರೂ ಅವರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ, ಜಮೀನನಲ್ಲಿ ವ್ಯವಸಾಯ ಮಾಡಲು ಅತಿಕ್ರಮಣಕಾರರು ಬಿಡುತ್ತಿಲ್ಲ, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕುಟುಂಬಕ್ಕೆ ಮಂಜೂರಾಗಿರುವ ಜಮೀನು ದಲಿತರಿಗೆ ಸೇರಿದೆ ಎಂಬ ಕಾರಣಕ್ಕೆ ಕುಳಲಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಬೆಳೆ ಸಾಲವನ್ನೂ ನೀಡುತ್ತಿಲ್ಲ, ಇಡೀ ಕುಟುಂಬ ಚಿತ್ರಹಿಂಸೆ ಅನುಭವಿಸುವಂತಾಗಿದೆ ಎಂದು ಹೇಳಿದರು.
ಜಮೀನು ಅತಿಕ್ರಮಣವನ್ನು ತಕ್ಷಣ ತೆರವುಗೊಳಿಸಿ ಸಣ್ಣ ನೀರಾವರಿ ಇಲಾಖೆಯಿಂದ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಬೇಕು, ಈ ಹಿಂದೆ ಸರ್ಕಾರ ಮಂಜೂರು ಮಾಡಿರುವಂತೆ ದಲಿತ ಕುಟುಂಬಕ್ಕೆ ಮುಧೋಳ ತಾಲ್ಲೂಕಿನ ಹಳೆಗುಡದಿನ್ನಿ ಪುನರ್ವಸತಿ ಕೇಂದ್ರದಲ್ಲಿ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು, ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.