ADVERTISEMENT

`ಜಾಗೋ ಜಾಗೋ ರೋಜೆದಾರ' ಬರೀ ನೆನಪು

ವೀರೇಂದ್ರ ಶೀಲವಂತ
Published 4 ಆಗಸ್ಟ್ 2013, 8:45 IST
Last Updated 4 ಆಗಸ್ಟ್ 2013, 8:45 IST

ರಾತ್ರಿ ಮೂರು ಗಂಟೆ. ಊರೆಲ್ಲ ನಿಶಬ್ದ. ಊರಿನ ಯಾವುದೋ ಮೂಲೆಯಲ್ಲಿ ಒಂದೆರಡು ನಾಯಿಗಳು ಬೊಗಳುವ, ಕೊಟ್ಟಿಗೆಯಲ್ಲಿಯ ದನ ಕರುಗಳು ಮೆಲುಕು ಹಾಕುವ, ಕಟ್ಟೆಯ ಮೇಲೆ ನಿಶ್ಚಿಂತೆಯಿಂದ ಮಲಗಿರುವವರ ಗೊರಕೆಯ ಶಬ್ದ ಬಿಟ್ಟರೆ ಮತ್ತೇನೂ ಕೇಳಿಸದು.

ಇದ್ದಕ್ಕಿದ್ದಂತೆಯೇ ಸುಶ್ರಾವ್ಯವಾಗಿ `ಜಾಗೋ ಜಾಗೋ ರೋಜೆದಾರ...' ಎಂಬ ಹಾಡು. ಢೋಲಕ್, ಜಂಝೀರ್, ಢಪಳಿ, ಮುಟ್ಟಿ ಜಂಝೀರ್ ಮುಂತಾದ ದೇಶೀ ವಾದ್ಯ ಪರಿಕರಗಳಿಂದ ಹಾಡಿಗೆ ತಕ್ಕಂತೆ ಸಂಗೀತದ ಸಾಥ್. ಮಲಗಿದವರೆಲ್ಲ ಎದ್ದು ಕುಳಿತು ತಾಳಕ್ಕೆ ತಕ್ಕಂತೆ ತೊಡೆ ತಟ್ಟುತ್ತಾ, ಚಪ್ಪಾಳೆ ಹಾಕುತ್ತಾ ಹಾಡನ್ನು ತಾವೂ ಗುನುಗುನಿಸುವುದು, ಎದ್ದು ನಿತ್ಯದ ಕಾರ್ಯಕ್ರಮ ಮುಗಿಸಿ ಉಪವಾಸ ಆರಂಭದ `ಸಹರಿ'ಗೆ ಸಜ್ಜಾಗುವುದು. ಇದು ಬೀಳಗಿ ಪಟ್ಟಣದ್ಲ್ಲಲಷ್ಟೇ ಅಲ್ಲ, ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಪವಿತ್ರ ರಮ್ಜಾನ್ ಮಾಸದಲ್ಲಿ ನಡೆಯುವ ಆಚರಣೆ.

ಇತ್ತೀಚೆಗೆ ಈ ದೇಶೀ ಕೂಸಿನ ಕತ್ತು ಹಿಚುಕಿ ಬಿಟ್ಟಿರುವುದರಿಂದ ಕೂಸಿನ ಧ್ವನಿ ಕೇಳುತ್ತಿಲ್ಲ. ವಾದ್ಯ ಪರಿಕರಗಳೆಲ್ಲವೂ ಮೂಲೆಗುಂಪಾಗಿವೆ. ಆಧುನಿಕ ತಂತ್ರಜ್ಞಾನದ ಮೂಸೆಯಿಂದ ಹೊರಬಿದ್ದ ಧ್ವನಿವರ್ಧಕ ಈ ಧ್ವನಿ ಆಲಿಸಿ ಸಂಭ್ರಮಪಡುತ್ತಿದ್ದವರ ಸಂಭ್ರಮ ಕಿತ್ತುಕೊಳ್ಳಲು ಕಾರಣ. ಮಸೀದಿಯ ಮುಖ್ಯಸ್ಥರು ಸಮಯಕ್ಕೆ ಸರಿಯಾಗಿ `ಏಳಿ, ಎದ್ದೇಳಿ, ಸಹರಿಯ ಸಮಯವಾಗಿದೆ' ಎಂದು ಒಮ್ಮೆ, `ಸಹರಿ ಸಮಯ ಇನ್ನು ಕೆಲವೇ ನಿಮಿಷ ಬಾಕಿ ಇದೆ' ಎಂದು ಮತ್ತೊಮ್ಮೆ `ಸಹರಿ ಸಮಯ ಮುಗಿಯಿತು' ಎಂದು ಮಗದೊಮ್ಮೆ ಹೇಳುವ ಹೊತ್ತಿಗೆ ಸೈರನ್ ಒಂದು  ಪಿಶಾಚಿಯಂತೆ ಕರ್ಣ ಕಠೋರವಾಗಿ ಅರಚಿ ಬಿಡುತ್ತದೆ. ಹೀಗಾಗಿ ಸುಶ್ರಾವ್ಯ ಹಾಡು, ವಾದ್ಯ ಪರಿಕರಗಳಿಂದ ಹೊರಡುವ ಸುನಾದ ಎಲ್ಲವೂ ಇನ್ನು ನಮಗೆ ನೆನಪು ಮಾತ್ರ.

ಪಟ್ಟಣದಲ್ಲಿ ಈ ಹಿಂದೆ ಉಪವಾಸ ವ್ರತಾಚರಣೆಯಲ್ಲಿೆ ತೊಡಗುವವರನ್ನು ಸಮಯಕ್ಕೆ ಸರಿಯಾಗಿ ಎಬ್ಬಿಸಲು ಸಿದ್ಧಗೊಂಡ ಒಂದು ತಂಡದ ಹಿಂದೆ ರೋಚಕ ಇತಿಹಾಸವೇ ಇದೆ. ಏಳೆಂಟು ಯುವಕರ ತಂಡವೊಂದು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಯೋಜಿಸಿತು. ರಾತ್ರಿ ಊಟದ ನಂತರ ಇಲ್ಲಿನ ಉರ್ದು ಶಾಲೆಯಲ್ಲಿ ಎಲ್ಲರೂ ಸೇರಿ ಅಲ್ಲಿಯೇ ಮಲಗಿಕೊಳ್ಳುತ್ತಿದ್ದರು. ಸರಿಯಾಗಿ ಎರಡೂವರೆ ಗಂಟೆಗೆ ಎದ್ದು ಪಟ್ಟಣದ ಪಶ್ಚಿಮ ದಿಕ್ಕಿನ ಪೊಲೀಸ್ ವಸತಿ ಗೃಹಗಳು, ದಕ್ಷಿಣದ ತಾಲ್ಲೂಕು ಅಭಿವೃದ್ಧಿ ಮಂಡಳದ ವಸತಿ ಗೃಹಗಳಿಂದ ತಮ್ಮ ದಿನಚರಿ ಆರಂಭಿಸುತ್ತಿದ್ದ ಇವರದು ಒಂದೇ ಮಾತು, `ನಮ್ಮಿಂದ ವ್ರತಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ, ಮಾಡುವವರಿಗೆ ನೆರವು ನೀಡೋಣ, ಭಗವಂತನ ಸೇವೆ ಅಷ್ಟಾದರೂ ಮಾಡೋಣ' ಎಂಬುದು. ಇದೇ ಕಾರಣದಿಂದ ತಿಂಗಳುಗಟ್ಟಲೆ ನಿದ್ದೆಗೆಟ್ಟು ಈ ಕರ್ತವ್ಯ ನಿರ್ವಹಿಸುತ್ತಿದ್ದರು.

ಶಬ್ಬೀರ ಅಹ್ಮದ ಜಮಖಂಡಿ, ಹಾಸೀಮ್‌ಪೀರ್ ಮುಜಾವರ, ಸೌದಾಗರ ಮೇಸ್ತ್ರಿ (ಕೆ.ಇ.ಬಿ.ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಉತ್ತಮ ಹಾಡುಗಾರರು.) ದಾದಾಪೀರ್ ಮಕಾನದಾರ್, ಮನ್ಸೂರ ಮುಲ್ಲಾ, ಮನ್ಸೂರ ಸಾಹೇಬ್ ಜಹಗೀರದಾರ( ಇವರು  ಮುಂದೆ ತಬಲಾ ವಾದಕರಾಗಿ ಹೆಸರು ಮಾಡಿದರು), ಚಾಂದ ಬಾದಶಹಾ ಬಾಗವಾನ, ಅಕ್ಬರ ಜುಮನಾಳ, ಮಹ್ಮದ್ ಹುಸೇನ ಮುಲ್ಲಾ (ಚೀನಿ) ಮುಂತಾದ ಯುವಕರ ತಂಡ ಹಾಡು ಹೇಳುತ್ತ ಹೊರಟರೆ ಗಂಜಲಶಾ ಮಕಾನದಾರ ಎಂಬ ವೃದ್ಧರು ಒಂದು ಕೈಯ್ಯಲ್ಲಿ ಲಾಟೀನು ಹಿಡಿದು ಇನ್ನೊಂದು ಕೈಯ್ಯಲ್ಲಿರುವ ಕೋಲಿನಿಂದ ವ್ರತಾಚರಣೆ ಮಾಡುವವರ ಮನೆಯ ಕದಕ್ಕೆ ತಟ್ಟಿ. ಕಟಕಟ ಶಬ್ದ ಮಾಡುತ್ತಾ `ಉಠೋ, ಉಠೋ' ಎಂದು ಸಾಗುತ್ತಿದ್ದರು.

ಯುವಕರ ಗುಂಪು ಸುಶ್ರಾವ್ಯವಾಗಿ `ಮಾಹೇ ರಮಜಾನ್ ಆಯಾ/ ಮಾಹೇ ರಮಜಾನ್ ಆಯಾ/ ಉಠೋಜಿ ಮುಸಲ್ಮಾನೋ/ ಏ ಬರ್ಕತ್‌ವಾಲಾ ಮಹಿನಾ ಹೈ' (ಪವಿತ್ರವಾದ ಹಾಗೂ ಶುಭ ತರುವ ರಮ್ಜಾನ್ ತಿಂಗಳು ಬಂದಿದೆ. ವ್ರತಾಚರಣೆಗೆ ಎದ್ದೇಳಿ) ಎಂದು 20 ದಿನಗಳ ಕಾಲ ಹಾಡುತ್ತಿದ್ದರು. ನಂತರದ ದಿನಗಳಲ್ಲಿ  ರಮ್ಜಾನ್ ತಿಂಗಳು ಕೊನೆಗೊಳ್ಳಲು ಬರುತ್ತಿದ್ದಂತೆ ಅಲ್‌ವಿದಾ (ಬೀಳ್ಕೊಡುವುದು). `ಹೋ ರಹಾ ಹೈ ಜುದಾ ಹಮ್‌ಸೇ/ ರೋ ರಹಾ ಏ ಗಮ್ ದಿಲ್‌ಸೇ/ಫಿರ್ ಪಾಯೇ ನಾ ಪಾಯೇ/ ಹಮೇ ಬುಲ್‌ಬುಲ್ ಪಾನೀಕಿ/ ಇಸ್ ಮಾಹಮೇ ರಖ್ಖಾ ಖೈದಮೇ ಸೈತಾನ್‌ಕೋ/ ಖೋಲಾ ಜನ್ನತಕೀ ದರವಾಜ್' (ಪವಿತ್ರ ರಮ್ಜಾನ್ ತಿಂಗಳು ನಮ್ಮಿಂದ ದೂರವಾಗುತ್ತಿದೆ. ಆ ಕಾರಣಕ್ಕಾಗಿ ಹೃದಯ ತುಂಬಿ ಅಳು ಬರುತ್ತಿದೆ. ಈ ತಿಂಗಳಿನಲ್ಲಿ ಭಗವಂತನು ಸೈತಾನನನ್ನು ಬಂಧಿಸಿಟ್ಟಿರುತ್ತಾನೆ. ಸ್ವರ್ಗದ ಬಾಗಿಲನ್ನು ತೆರೆದಿಟ್ಟಿರುತ್ತಾನೆ)ಎಂಬ ಸುಶ್ರಾವ್ಯವಾದ ಹಾಗೂ ರಮ್ಜಾನ್ ಮಾಸದ ಮಹತಿ ಸಾರುವ ಹಾಡನ್ನು ಕೇಳುತ್ತಿದ್ದರೆ ಮನಕ್ಕೆ ಏನೋ ಒಂದು ರೀತಿಯ ಮುದ ನೀಡಿದಂತಾಗುತ್ತಿತ್ತು.

ಹಾಡು ಹೇಳುತ್ತ ಹೋಗುತ್ತಿರಬೇಕಾದರೆ `ಏ ಅಕ್ಬರ್ ಚಾ ಕುಡದ ಹೋಗಬರ‌್ರಿ' ಎನ್ನುತ್ತಿದ್ದ ದಾನಪ್ಪ ಅಣ್ಣಾವ್ರ, ಗುರುಲಿಂಗಪ್ಪ ಶೆಟ್ರು, `ಏ ನಿಮಗಂತ್ಹೇಳೇ ಉಪ್ಪಿಟ್ಟ ಮಾಡಿಸೀನ್ರ್ಯೋ,  ನ್ಯಾರಿ (ಉಪಹಾರ) ಮಾಡಬೇಕು, ಇನ್ನೊಂದ ಹಾಡಾ ಹಾಡಬೇಕು” ಎನ್ನುವ ಊರ ಪಟೇಲರಾದ ಹೇಮನಗೌಡರು, `ಅಲ್ಲೋ ಮನ್ಸೂರ್, ನಾಳೆ ನಮ್ಮ ಕಟ್ಟಿ ಮ್ಯಾಲೆ ಕೂತಗೊಂಡು ಛಾ ಕುಡ್ದೇ ಹೋಗಬೇಕು, ಎರಡ್ ರೂಪಾಯಿ ಬಕ್ಷೆಸೂ ಕೊಡ್ತೀನಿ, ತುಗೋಬೇಕು, ಇರಲೀಕ ನಾನು ಬಿಡೂದೇ ಇಲ್ಲ ನೋಡಪಾ ಮತ್ತ' ಎನ್ನುತ್ತಿದ್ದ ಊರ ಪ್ರಮುಖರಾದ ಬಾಂಡ್ ರೈಟರ್ ದೇಶಪಾಂಡೆ. ಕೋಮು ಸೌಹಾರ್ದ ಹಾಗೂ ಭಾವೈಕ್ಯತೆಗೆ ಬೀಳಗಿ ಪಟ್ಟಣ, ತಾಲ್ಲೂಕು ಸಾಕ್ಷಿಯಾಗಿ ನಿಲ್ಲುತ್ತದೆ. `ನಮ್ಮನ್ನ ಹಾಡಂತ ಹೇಳಿ  ಸಂತೋಷಪಡ್ತಿದ್ದ ಇವರ‌್ಯಾರೂ ಇಂದಿಲ್ಲ , ಇವೆಲ್ಲಾ ಇನ್ನ ಮ್ಯಾಲೆ ನೆನಪಷ್ಟ ನೋಡ್ರೀ ಅಣ್ಣಾವ್ರ, ಎಲ್ಲಾ ಸುಧಾರಸಾಕ ಹತ್ಯಾವು, ಹಳಿ ಸಾಮಾನು ತುಗೊಂಡ ಹಾಡ್ಕೋತ ಬಂದ್ರ ಯಾರ ಕೇಳ್ತಾರ ಬಿಡ್ರೀ' ಎನ್ನುತ್ತಾರೆ ವ್ಯಾಪಾರಿಯಾಗಿರುವ ಶಬ್ಬೀರ್ ಅಹ್ಮದ್ ಜಮಖಂಡಿ. ಆದರೆ ಹಳೆಯದು ಅಪ್ಪಟ ಚಿನ್ನ, ಹೊಸದು ನಕಲಿ ಚಿನ್ನವೆಂದು ಅವರೇ ಒಪ್ಪಿಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.