ADVERTISEMENT

ತಾಂತ್ರಿಕ ಉತ್ಸವ: ಕೌಶಲ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 6:45 IST
Last Updated 14 ಏಪ್ರಿಲ್ 2011, 6:45 IST
ತಾಂತ್ರಿಕ ಉತ್ಸವ: ಕೌಶಲ ಹೆಚ್ಚಳ
ತಾಂತ್ರಿಕ ಉತ್ಸವ: ಕೌಶಲ ಹೆಚ್ಚಳ   

ಬಾಗಲಕೋಟೆ: ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಾಂತ್ರಿಕ ಕೌಶಲಗಳನ್ನು ಹೆಚ್ಚಿಸುವಲ್ಲಿ ತಾಂತ್ರಿಕ ಉತ್ಸವಗಳು ಸಹಕಾರಿಯಾಗುತ್ತವೆ ಎಂದು ಕರ್ನಾಟಕ ರಸ್ತೆ ಮೂಲಭೂತ ಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಬಿ.ಕುಬಸದ ಹೇಳಿದರು.ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಏರ್ಪಡಿಸಲಾಗಿರುವ ಆಸ್ಟ್ರೋಬ್ಸ್-2011 ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಗಾಧವಾಗಿ ಬೆಳೆಯುತ್ತಿರುವ ನಿರ್ಮಾಣ ಕ್ಷೇತ್ರದಲ್ಲಿನ ಹೊಸ ಸಾಧ್ಯತೆಗಳನ್ನು ಇಂತಹ ಉತ್ಸವಗಳಲ್ಲಿ ಮಂಡಿಸಲಾಗುವ ಪ್ರಬಂಧಗಳಿಂದ ತಿಳಿದುಕೊಳ್ಳಬಹುದು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಚರಂತಿಮಠದ ಪ್ರಭುಸ್ವಾಮಿ, ವ್ಯಕ್ತಿಯು ತನ್ನ ವೈಯಕ್ತಿಕ ಹಿತಕ್ಕಿಂತ ಸಮಾಜ ಹಾಗೂ ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

“ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ. ವ್ಯಕ್ತಿಗಳಲ್ಲಿ ಅಧ್ಯಾತ್ಮಿಕಶಕ್ತಿ ಸಾಕಾರಗೊಂಡಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದು ಸಾಧ್ಯವಾಗುತ್ತದೆ” ಎಂದು ಹೇಳಿದರು.75 ವರ್ಷ ಪೂರೈಸಿದ ಬವಿವ ಸಂಘದ ಅಭಿವೃದ್ಧಿ ಅಧಿಕಾರಿ ಪ್ರೊ.ಎಸ್.ಆರ್.ಗುಡಿಸಾಗರ ದಂಪತಿಯನ್ನು ಬವಿವ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬವಿವ ಸಂಘದ ಕಾರ್ಯಾಧ್ಯಕ್ಷ ಹಾಗೂ ಶಾಸಕ ವೀರಣ್ಣ ಚರಂತಿಮಠ, ಸಂಘದ ಬೆಳವಣಿಗೆಗೆ ಪ್ರೊ.ಗುಡಿಸಾಗರ ಅವರು ನೀಡಿದ ಕೊಡುಗೆಯನ್ನು ವಿವರಿಸಿದರು.
ಸಂಘದ ಆಡಳಿತಾಧಿಕಾರಿ ಪ್ರೊ.ಎನ್.ಜಿ.ಕರೂರ ಹಾಗೂ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎನ್.ಹೆರಕಲ್ ಅವರು ಗುಡಿಸಾಗರರ ಸೇವೆ ಮತ್ತು ಅವರೊಂದಿಗಿನ ಒಡನಾಟ ನೆನಪಿಸಿಕೊಂಡರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಎಸ್.ಆರ್.ಗುಡಿಸಾಗರ, ಬಾಗಲಕೋಟೆಯೊಂದಿಗಿನ ಅವಿನಾಭಾವ ಸಂಬಂಧ ಹಾಗೂ ಕಾರ್ಯಾಧ್ಯಕ್ಷರ ಕಳಕಳಿಯನ್ನು ವಿವರಿಸಿದರು.ಆಸ್ಟ್ರೋಬ್ಸ್ ಸಂಯೋಜಕ ಡಾ.ಎಸ್.ಎಸ್.ಇಂಜನಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಡಾಸಿ.ಬಿ.ಶಿವಯೋಗಿಮಠ ಸ್ವಾಗತಿಸಿದರು. ಇನ್ನೋರ್ವ ಸಂಯೋಜಕ ಪ್ರೊ.ಬಿ.ಆರ್. ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.