ADVERTISEMENT

ತೆಗ್ಗಿ ಗ್ರಾಮದಲ್ಲಿ ಜೀವಜಲಕ್ಕೆ ಹಾಹಾಕಾರ

ಜಾನುವಾರುಗಳಿಗೆ ಹಳ್ಳದಲ್ಲಿನ ಒರತೆ ನೀರೇ ಗತಿ, ಜನರಿಗೆ ಅನಾರೋಗ್ಯದ ಭೀತಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 6:04 IST
Last Updated 28 ಏಪ್ರಿಲ್ 2018, 6:04 IST
ನಳದ ನೀರಿಗಾಗಿ ಜನ ಕಾಯುತ್ತಿರುವುದು
ನಳದ ನೀರಿಗಾಗಿ ಜನ ಕಾಯುತ್ತಿರುವುದು   

ಬಾಗಲಕೋಟೆ: ಬೆಳಗಾದರೆ ಸಾಕು, ಕುಡಿಯುವ ನೀರಿಗಾಗಿ ಮಹಿಳೆಯರು ಹಾಗೂ ಮಕ್ಕಳು ಕೊಡ ಇಟ್ಟುಕೊಂಡು ಟ್ಯಾಂಕರ್ ನೀರಿಗಾಗಿ ಉರಿಬಿಸಿಲಿನಲ್ಲಿ ಕಾಯುವ ಸ್ಥಿತಿ ಎದುರಾಗಿದೆ.

ಸಮರ್ಪಕವಾಗಿ ನೀರು ಸಿಗದೇ ಗ್ರಾಮದ ಹೊರವಲಯದಲ್ಲಿರುವ ಹೊಂಡದ ನೀರನ್ನೇ ಅವಲಂಬಿಸಬೇಕಾದ  ಅನಿವಾರ್ಯತೆ ಇದೆ. ಬಾದಾಮಿ ತಾಲ್ಲೂಕಿನ ಕೆಲವಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆಗ್ಗಿ ಗ್ರಾಮಸ್ಥರು ನಿತ್ಯ ನೀರಿಗಾಗಿ ಪರದಾಡುತ್ತಿದ್ದಾರೆ.
ಈಗ ಬಿಸಿಲ ಧಗೆ ಹೆಚ್ಚಾಗಿರುವುದರಿಂದ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಗ್ರಾಮದಲ್ಲಿ ಒಟ್ಟು 220 ಮನೆಗಳಿದ್ದು, 1,150ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಆದರೆ, ಅಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿ ಉಳಿದಿದೆ. ಈಗ ಬೇಸಿಗೆ ಆರಂಭವಾಗಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಸ್ಥಳೀಯ ಆಡಳಿತದ ಕಾರ್ಯ ವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

‘ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಫ್ಲೋರೈಡ್‌ಯುಕ್ತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಕೆಲವಡಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದೆ.ಟ್ಯಾಂಕರ್ ನೀರು ಬರುವಿಕೆಯನ್ನು ನಿತ್ಯ ಎದುರು ನೋಡುವುದೇ ಕೆಲಸವಾಗಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಜನ, ಜಾನುವಾರುಗಳಿಗೆ ಗ್ರಾಮದ ಹೊರವಲಯದಲ್ಲಿರುವ ಹಳ್ಳದಲ್ಲಿನ ಒರತೆ ನೀರು ಗತಿ. ಬಟ್ಟೆ ತೊಳೆಯಲು ಮಹಿಳೆಯರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಯಿದೆ. ಹೊಂಡದ ನೀರಿನಲ್ಲಿ ವಿಷಜಂತುಗಳು ಕಾಣಿಸಿಕೊಳ್ಳುತ್ತಿದ್ದು, ಭಯದಲ್ಲಿಯೇ ದಿನದೂಡುವಂತಾಗಿದೆ’ ಎಂದು ಗ್ರಾಮಸ್ಥೆ ಇಂದ್ರವ್ವ ಅಳಲು ತೋಡಿಕೊಂಡರು. ಇದರಿಂದ
ಜನರಲ್ಲಿ ಅನಾರೋಗ್ಯದ ಭೀತಿ ಎದುರಾಗಿದೆ.

‘ತೆಗ್ಗಿ ಗ್ರಾಮದಲ್ಲಿನ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಈಗಾಗಲೇ ಎರಡು ತಿಂಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೂರು ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ದೊರೆತಿಲ್ಲ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಜಯ್‌ಕುಮಾರ ಕೋತಿನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಡಕಲ್ ಜಲಾಶಯಕ್ಕೆ ನೀರು ಬಂದಲ್ಲಿ ನೀರಿನ ತೊಂದರೆಯಾಗುವುದಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಎಂವಿಎಸ್‌) ಮೂಲಕ ನೀರು ಪೂರೈಕೆ ಮಾಡಬಹುದಾಗಿದೆ’ ಎಂದರು.

**
ಕೆಲವಡಿ ಗ್ರಾಮ ಪಂಚಾಯ್ತಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ
- ಹನುಮಂತ ಕಡಿವಾಲ, ಗ್ರಾಮಸ್ಥ
**

ಮಹಾಂತೇಶ್ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.