ADVERTISEMENT

ತೊಗರಿಗೆ ₹6 ಸಾವಿರ ಬೆಂಬಲ ಬೆಲೆ: ನ್ಯಾಮಗೌಡ

ಎಪಿಎಂಸಿ ಆವರಣದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 5:14 IST
Last Updated 31 ಡಿಸೆಂಬರ್ 2017, 5:14 IST

ಜಮಖಂಡಿ: ಪ್ರತಿ ಕ್ವಿಂಟಲ್ ತೊಗರಿಗೆ ₹6 ಸಾವಿರ ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತದೆ. ರೈತರು ಗುಣಮಟ್ಟದ ತೊಗರಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕು ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ತೆರೆಯಲಾಗಿರುವ ತೊಗರಿ ಖರೀದಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಕ್ವಿಂಟಲ್‌ ತೊಗರಿಗೆ ಕೇಂದ್ರ ಸರ್ಕಾರ ₹5450 ಬೆಂಬಲ ಬೆಲೆ ನೀಡಿದೆ. ಅದರ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹550 ಸೇರಿಸಿ ಒಟ್ಟು ₹6 ಸಾವಿರ ಬೆಲೆ ನೀಡಿ ತೊಗರಿ ಖರೀದಿಸಲಾಗುತ್ತದೆ. ತೊಗರಿ ಮಾರಾಟ ಮಾಡ ಬಯಸುವ ರೈತರು 2018 ರ ಜನವರಿ 1 ರಿಂದ 16 ರ ವರೆಗೆ ಟಿಎಪಿಸಿಎಂಎಸ್‌ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ತೊಗರಿ ಖರೀದಿಸಿದ ಒಂದು ತಿಂಗಳ ಅವಧಿಯಲ್ಲಿ ಬಿಲ್ಲಿನ ಹಣ ಪಾವತಿಸಲಾಗುವುದು ಎಂದರು.

ADVERTISEMENT

ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಅಧಿಕಾರಿಗಳು ಸಹ ರೈತರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೆ ತೊಗರಿ ಖರೀದಿ ಕೇಂದ್ರ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಸರ್ವರೂ ಸಹಕರಿಸಬೇಕು ಎಂದರು. ಎಪಿಎಂಸಿ ಅಧ್ಯಕ್ಷ ಮಹಾದೇವ ದೈಗೊಂಡ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪರಗೌಡ ಬಿರಾದಾರಪಾಟೀಲ, ಚನ್ನಮಲ್ಲಪ್ಪ ನ್ಯಾಮಗೌಡ, ಮಲ್ಲೇಶ ಸಾವಳಗಿ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.