ADVERTISEMENT

ದುರ್ಗಾದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:26 IST
Last Updated 15 ಜೂನ್ 2013, 10:26 IST

ಬಾಗಲಕೋಟೆ:  ನಗರದ ವಾಸವಿ ಚಿತ್ರಮಂದಿರದ ಸಮೀಪ ಇರುವ ಸೆಟಲ್‌ಮೆಂಟ್ ಕಾಲೊನಿಯಲ್ಲಿರುವ ದಂಡಿನ ದುರ್ಗಾದೇವಿ ಜಾತ್ರೆಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.

ದಂಡಿನ ದುರ್ಗಾದೇವಿ ಜಾತ್ರೆಯನ್ನು ಈ ಕಾಲೊನಿ ಜನ ಪ್ರತಿವರ್ಷ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಅದರಂತೆ ಈ ವರ್ಷವೂ ಜಾತ್ರಾಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ನಗರದ ದುರ್ಗಾದೇವಿಯ ದೇವಸ್ಥಾನದಿಂದ ಆರಂಭಗೊಂಡ ದೇವಿಯ ಮೆರವಣಿಗೆ  ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಜಾತ್ರಾ ಮಹೋತ್ಸವದ ನಿಮಿತ್ತ ದುರ್ಗಾದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳಿಗ್ಗೆ ದುರ್ಗಾದೇವಿಗೆ ವಿವಿಧ ಹೂವುಗಳು ಹಾಗೂ ಸೀರೆಯಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸಾಲು ಸಾಲಾಗಿ ಆಗಮಿಸಿ ದೇವಿಯ ದರ್ಶನ ಪಡೆದು ನೈವೇದ್ಯ ಸಲ್ಲಿಸಿದರು.

ನಂತರ ಮಧ್ಯಾಹ್ನ 12 ಗಂಟೆಗೆ ದೇವಿಯ ಆವರಣದಲ್ಲಿ ಅರ್ಚಕರಿಬ್ಬರೂ ತಮ್ಮ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವುದನ್ನು ನೋಡಲು ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದುದು ವಿಶೇಷವಾಗಿದೆ.

ದಂಡಿನ ದುರ್ಗಾದೇವಿ ಅರ್ಚಕರಾದ ಮನ್ನಪ್ಪ ಚವಾಣ್ 2 ಮತ್ತು ಶಿವಾಜಿ ಮನ್ನಪ್ಪ ಚವಾಣ್  7 ತೆಂಗಿನ ಕಾಯಿಗಳನ್ನು ತಲೆಗೆ ಒಡೆದುಕೊಂಡರು. `ದೇವಿಯ ಆಶೀರ್ವಾದದಿಂದ ಪ್ರತಿವರ್ಷ 20ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಒಡೆದುಕೊಳ್ಳುತ್ತಿದ್ದೆವು. ಈ ಬಾರಿ ವರ್ಷ ಸ್ವಲ್ಪ ದಿನ ಸರಿಯಾಗಿ ಇಲ್ಲದ ಕಾರಣ ಕಡಿಮೆ ಕಾಯಿಗಳನ್ನು ಒಡೆದುಕೊಂಡೆವು' ಎಂದು ಅವರು ತಿಳಿಸಿದರು.

ಅಣ್ಣಪ್ಪ ಕಾಳೆ, ಸೀಜಾನಿ ಕಾಳೆ, ಶಂಕರ ಪವಾರ, ಅಪ್ಪಣ್ಣ ಚವಾಣ್, ಕುಮಾರ ಪವಾರ ಮತ್ತಿತರರು ಜಾತ್ರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.